ಬೆಂಗಳೂರು, (ಮೇ.07): ರೈಲು ವಿಳಂಬದಿಂದಾಗಿ ‘ನೀಟ್‌’ ಪರೀಕ್ಷೆಯಿಂದ ವಂಚಿತರಾದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ಬಗ್ಗೆ ಸೋಮವಾರ ಹೇಳಿಕೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು, ರೈಲು ವಿಳಂಬದಿಂದಾಗಿ ‘ನೀಟ್‌’ ಪರೀಕ್ಷೆಯಿಂದ ವಂಚಿತರಾದ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಇದೇ ತಿಂಗಳ 20ರಂದು ಈ ಮೊದಲು ನಿಗದಿಪಡಿಸಿದ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಗುಡ್ ನ್ಯೂಸ್: ನೀಟ್ ಪರೀಕ್ಷೆ ಮಿಸ್ ಮಾಡಿಕೊಂಡಿದ್ದವರಿಗೆ ಮತ್ತೊಂದು ಚಾನ್ಸ್..!

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ರಾಜ್ಯದಲ್ಲಿ ಭಾನುವಾರ ನಡೆದ ನೀಟ್‌ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಸುಮಾರು 500 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ರೈಲ್ವೆ ವಿಳಂಬದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಎಸ್‌. ಸುರೇಶಕುಮಾರ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಟ್ವೀಟ್‌ ಮೂಲಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಅಧಿಕಾರಿಗಳ ಜೊತೆ ಸಿಎಂ ಸಭೆ:
ಪರೀಕ್ಷೆಯಿಂದ ವಂಚಿತರಾಗಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಿತ ಕಾಯುವ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ್ದರು.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ಜಾವಡೇಕರ್‌ಗೆ ಡಿವಿಎಸ್‌ ಪತ್ರ:
ಈ ಮಧ್ಯೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸಹ ದೂರವಾಣಿ ಮೂಲಕ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ಜೊತೆ ಮಾತನಾಡಿ ನೀಟ್‌ ಪರೀಕ್ಷೆ ವಂಚಿತ ವಿದ್ಯಾರ್ಥಿಗಳ ಸಮಸ್ಯೆಯನ್ನು ಆದಷ್ಟುಬೇಗ ನಿವಾರಣೆ ಮಾಡಬೇಕೆಂದು ಮನವಿ ಮಾಡಿದ್ದರು. 

ಜೊತೆಗೆ ಪತ್ರವೊಂದನ್ನು ಬರೆದು, ಕೊನೆ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲಾಯಿಸಿದ್ದರಿಂದ ಹಾಗೂ ಹಂಪಿ ಎಕ್ಸ್‌ಪ್ರೆಸ್‌ ರೈಲು ತಡವಾಗಿ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಲಿಲ್ಲ. 

ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೊದಲೇ ತಿಳಿಸಿದ್ದರೆ ವಿದ್ಯಾರ್ಥಿಗಳು ಈ ರೀತಿ ತೊಂದರೆ ಎದುರಿಸುವುದನ್ನು ತಪ್ಪಿಸಬಹುದಿತ್ತು. ಪರೀಕ್ಷೆ ವಂಚಿತ ಎಲ್ಲ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಬಿಜೆಪಿ ಶಾಸಕ ಸುರೇಶಕುಮಾರ್‌ ಅವರು ಸಹ ಟ್ವೀಟ್‌ ಮಾಡಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳು ನಮ್ಮ ಮಕ್ಕಳು. ಈ ಅಮಾಯಕ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಿ ಅವರ ಕನಸು ಕಮರಿ ಹೋಗದಂತೆ ನೋಡಿಕೊಳ್ಳಬೇಕು. ಪಕ್ಷಾತೀತವಾಗಿ ಎಲ್ಲರೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ಕೇಂದ್ರಕ್ಕೆ ಸಿಎಂ, ಡಿವಿಎಸ್‌ ಅಭಿನಂದನೆ
ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಧನ್ಯವಾದ ತಿಳಿಸಿ, ರಾಜ್ಯದ ವಿದ್ಯಾರ್ಥಿಗಳು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.