ಬೆಂಗಳೂರು[ಏ.15]: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಮಾ.1ರಿಂದ 18ರ ವರೆಗೆ ನಡೆಸಲಾಗಿರುವ 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಲಾಖೆ ನಿರ್ದೇಶಕಿ ಸಿ.ಶಿಖಾ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ನಲ್ಲಿ ಮತ್ತು ಏ.16ರಂದು ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಒಟ್ಟು 61.73 % ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶೇ. 68.24 ಬಾಲಕಿಯರು ಹಾಗೂ ಶೇ. 55.29 ಬಾಲಕರು ತೇರ್ಗಡೆ ಹೊಂದಿದ್ದಾರೆ. ಮೊದಲ ಸ್ಥಾನ ಉಡುಪಿ- ಶೇ.92.20, ಎರಡನೇ ಸ್ಥಾನ ದಕ್ಷಿಣ ಕನ್ನಡ ಶೇ. 90.91, ತೃತೀಯ ಸ್ಥಾನ ಕೊಡಗು ಶೇ 83.31 ಹಾಗೂ ಚಿತ್ರದುರ್ಗ ಶೇ.51.42 ರಷ್ಟು ಗಳಿಸಿ ಕೊನೆಯ ಸ್ಥಾನದಲ್ಲಿದೆ.

ಯಾವ ವಿಭಾಗಕ್ಕೆ ಎಷ್ಟು ಫಲಿತಾಂಶ?

ಕಲಾ    - 50.53- 594

ವಾಣಿಜ್ಯ- 66.39-596

ವಿಜ್ಞಾನ - 66.58 - 594

ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪ್ 10 ಸ್ಥಾನ ಪಡೆದ ವಿದ್ಯಾರ್ಥಿಗಳಿವರು!

ರಾಜ್ಯದ 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ 80 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ದಾಖಲಾಗಿದೆ. ಮೇ 8ರವರೆಗೆ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದ್ದು, 2019ರ ಜೂನ್ ಮೊದಲ ವಾರದಲ್ಲೇ ಸಪ್ಲಿಮೆಂಟರಿ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ಫಲಿತಾಂಶವು ಸೋಮವಾರ ಮಧ್ಯಾಹ್ನ 12 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಬಳಸಿ ಇಲಾಖೆ ವೆಬ್‌ಸೈಟ್‌ pue.kar.nic.inwww. karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಈ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದವರು ಸಹಜವಾಗಿಯೇ ಅತ್ಯಂತ ಉತ್ಸಾಹದಿಂದ ಇದ್ದರೆ, ಕಡಿಮೆ ಅಂಕ ಪಡೆದವರ ಮನಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ವಿದ್ಯಾರ್ಥಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಗಳು ಹೇಗೆ ಸ್ವೀಕರಿಸಬೇಕು?

- ಪರೀಕ್ಷೆಯ ಫಲಿತಾಂಶವೇ ಮುಖ್ಯವಲ್ಲ, ಜೀವನದಲ್ಲಿ ಕಲಿಕೆ ಅದಕ್ಕಿಂತ ಮುಖ್ಯವಾಗಿದೆ.

- ಫಲಿತಾಂಶ ಕುರಿತು ವಿದ್ಯಾರ್ಥಿಗಳು ಪೋಷಕರ ಬಳಿ ಸುಳ್ಳು ಹೇಳಬೇಡಿ. ನಿಜ ಹೇಳಿದ ಬಳಿಕ ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುವ ಭರವಸೆ ನೀಡಿ.

- ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕುರಿತು ವಿಮರ್ಶಿಸಿ. ಸಕಾರಾತ್ಮಕ ಹಾಗೂ ಸಾವಧಾನವಾಗಿ ಚಿಂತನೆ ನಡೆಸಿ. ಆರಾಮವಾಗಿ ಇರಿ.

- ಭವಿಷ್ಯದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಕಷ್ಟುಅವಕಾಶಗಳಿವೆ. ಮತ್ತೊಂದು ಪ್ರಯತ್ನದಲ್ಲಿ ತೇರ್ಗಡೆಯಾಗುವೆ ಎಂಬ ಛಲ ಮೂಡಲಿ.

ಪೋಷಕರು ಹೇಗೆ ವರ್ತಿಸಬೇಕು?

- ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳ ಜತೆಯಲ್ಲಿರುವುದು ಉತ್ತಮ.

- ಮಕ್ಕಳು ಕಡಿಮೆ ಅಂಕಗಳನ್ನು ಪಡೆದರೆ ಅವರ ಮುಂದೆ ನಿರಾಸೆ, ಆತಂಕ ತೋರ್ಪಡಿಸಬೇಡಿ.

- ಮಕ್ಕಳೊಂದಿಗೆ ಸಮಾಧಾನದಿಂದ ವರ್ತಿಸಿ, ಧೈರ್ಯ ತುಂಬಿ, ಮುಂದಿನ ಪರೀಕ್ಷೆಗಳು ಹಾಗೂ ಕಲಿಕೆ ಬಗ್ಗೆ ತಿಳಿಸಿಕೊಡಿ. ಹಸನ್ಮುಖಿಯಾಗಿರಿ.

- ಮಕ್ಕಳ ಮನಸ್ಸು ಅತಿ ಸೂಕ್ಷ್ಮವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಫಲಿತಾಂಶ ಪ್ರಕಟವಾದ 2-3 ದಿನಗಳ ಬಳಿಕ ಫಲಿತಾಂಶ ಕುರಿತು ಮನನ ಮಾಡಿಕೊಡಿ.

- ವಿದ್ಯಾರ್ಥಿಗಳು ತಮಗೆ ಬೇಜಾರಾಗಿದೆ ಎಂದು ಮಾನಸಿಕವಾಗಿ ಕುಗ್ಗಿದ್ದರೆ ಎಚ್ಚರ ವಹಿಸಿ ಪ್ರೋತ್ಸಾಹದ ಮಾತುಗಳನ್ನಾಡಿ.