ಬೆಂಗಳೂರು[ಜ.29]: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತರಿಸಲು ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ಪ್ಯಾಟರ್ನ್‌ ಹಾಗೂ ಉತ್ತರಿಸುವ ವಿಧಾನ ತಿಳಿಸುವ ವಿಡಿಯೋ ರೂಪಿಸಿ, ಬಿಡುಗಡೆ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಮಂಗಳವಾರ ಡಿಎಸ್‌ಇಆರ್‌ಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವೇದನಾ- ಪೋನ್‌ ಇನ್‌ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ ಕರೆ ಮಾಡಿದ್ದ 36 ಮಂದಿ ಪೈಕಿ ಬಹುತೇಕ ವಿದ್ಯಾರ್ಥಿಗಳು ಬದಲಾಗಿರುವ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಪ್ಯಾಟರ್ನ್‌ ಕುರಿತು ಆತಂಕ ವ್ಯಕ್ತಪಡಿಸಿದರು.

SSLC ಪರೀಕ್ಷಾ ಅವಧಿ ವಿಸ್ತರಣೆ: ಸಚಿವ ಸುರೇಶ್‌!

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷಾ ಪದ್ಧತಿಯಲ್ಲಿ ತಂದಿರುವ ಬದಲಾವಣೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದಕ್ಕಾಗಿ ವೀಡಿಯೋ ರೆಕಾರ್ಡ್‌ ಮಾಡಿ ಯೂಟ್ಯೂಬ್‌, ಫೇಸ್‌ಬುಕ್‌, ವೆಬ್‌ಸೈಟ್‌, ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ವಿದ್ಯಾರ್ಥಿಗಳು ಆತಂಕ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಧೈರ್ಯ ತುಂಬಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಧಾನ, ಅಂಕಗಳ ವಿವರ, ಸಮಯ ನಿಗದಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ, ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶ್ನೆಗಳು ಇರುತ್ತವೆ. ಹೆಚ್ಚಿನ ಬದಲಾವಣೆ ಮಾಡಿಲ್ಲ. ಕೆಲವು ಮಾತ್ರ ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರ್ಧ ಗಂಟೆ ಸಮಯ ಕೂಡ ಹೆಚ್ಚಳ ಮಾಡಲಾಗಿದೆ ಎಂದರು.

ಪರೀಕ್ಷೆಯಲ್ಲಿ ವ್ಯಾಕರಣ ದೋಷಕ್ಕೆ ಅಂಕ ಕಳೆಯುತ್ತಾರೆಯೇ ಎಂದು ಹೊಸಪೇಟೆಯ ಶಿವಪ್ರಸಾದ್‌ ಎಂಬುವರು ಕೇಳಿದ ಪ್ರಶ್ನೆಗೆ, ಸಣ್ಣಪುಟ್ಟವ್ಯಾಕರಣ ದೋಷಕ್ಕೆ ಅಂಕಗಳನ್ನು ಕಡಿತ ಮಾಡುವುದಿಲ್ಲ. ಸಂಪೂರ್ಣ ವ್ಯಾಕರಣ ದೋಷ ಇರುವ ಉತ್ತರ ಪತ್ರಿಕೆಗೆ ಗ್ರೀನ್‌ ಟ್ಯಾಗ್‌ ಹಾಕಿರುತ್ತೇವೆ. ಅಂತಹ ಉತ್ತರ ಪತ್ರಿಕೆಯನ್ನು ಯಾವ ರೀತಿಯಲ್ಲಿ ಮೌಲ್ಯಮಾಪನ ಮಾಡಬೇಕು ಎಂಬುದರ ಬಗ್ಗೆಯೂ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ ಎಂದು ಅಭಯ ನೀಡಿದರು.

ಕೃಪಾಂಕದ ಬಗ್ಗೆ ಸಿಂಧು ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ, ಕೃಪಾಂಕ ನೀಡಬೇಕೆ ಅಥವಾ ಬೇಡವೆ ಎಂಬುದನ್ನು ಮಂಡಳಿಯಿಂದ ನಿರ್ಧಾರ ಮಾಡಲಾಗುತ್ತದೆ. ಆದರೆ, ಕೃಪಾಂಕಕ್ಕಾಗಿಯೇ ಕಾಯುವುದು ಸರಿಯಲ್ಲ. ಎಲ್ಲವನ್ನು ಓದಿಕೊಂಡು, ಉತ್ತರ ಬರೆಯಬೇಕು ಎಂದು ಸಲಹೆ ನೀಡಿದರು.

SSLC ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ಫಸ್ಟ್ : ರಹಸ್ಯ ಬಿಚ್ಚಿಟ್ಟ ಶಿಕ್ಷಕ

ಸಿಇಟಿ ಕೋಚಿಂಗ್‌ ಪ್ರಸ್ತಾವನೆ:

ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಕೋಚಿಂಗ್‌ ನೀಡುವಂತೆ ಹಿರಿಯೂರಿನ ಭಾಗ್ಯಶ್ರೀ ಕೇಳಿದ ಪ್ರಶ್ನೆಗೆ ಪಿಯು ಇಲಾಖೆ ನಿರ್ದೇಶಕಿ ಕನಕವಳ್ಳಿ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್‌ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪರಿಶೀಲನಾ ಹಂತದಲ್ಲಿದೆ. ಈ ಕುರಿತ ಪಠ್ಯಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದನ್ನು ಅಧ್ಯಯನ ಮಾಡಬಹುದು ಎಂದರು. ಇದಕ್ಕೆ ದನಿಗೂಡಿಸಿದ ಸಚಿವರು, ಈ ವಿಚಾರವಾಗಿ ಸಂಬಂಧಪಟ್ಟಅಧಿಕಾರಿಗಳ ಜತೆ ಚರ್ಚೆ ಮಾಡಲಾಗುತ್ತದೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ಶಿಕ್ಷಕರನ್ನು ನಿಯೋಜಿಸಿ:

ವಿಶೇಷ ಚೇತನ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಶಿಕ್ಷಕರನ್ನು ನೇಮಿಸಿ ಎಂದು ಬೆಳಗಾವಿ ಅಂಧಮಕ್ಕಳ ಶಾಲೆಯ ಶಿಕ್ಷಕ ಶಂಕರ್‌ ಗೌಡ ಪಾಟೀಲ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ದೇಶಕರು, ವಿಶೇಷ ಶಿಕ್ಷಕರನ್ನು ನೀಡಲು ಸಾಧ್ಯವಿಲ್ಲ. ಶಿಕ್ಷಕರು ಪ್ರಶ್ನೆ ಹೇಳುತ್ತಿದ್ದಾರೋ ಅಥವಾ ಉತ್ತರ ಹೇಳಿಕೊಡುತ್ತಿದ್ದಾರೋ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ 9 ಅಥವಾ 11ನೇ ತರಗತಿಯ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಇದಕ್ಕಾಗಿ ನೇಮಿಸಲಿದ್ದೇವೆ ಎಂದರು.