ಬೆಂಗಳೂರು(ಜೂ.24): ರಾಜ್ಯದಲ್ಲಿ ಜೂ.25ರಿಂದ ಜು.4ರ ವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 4.48 ಲಕ್ಷ ಬಾಲಕರು ಹಾಗೂ 3.99 ಲಕ್ಷ ಬಾಲಕಿಯರು ಸೇರಿದಂತೆ 8.48 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

"

ಸರ್ಕಾರಿ ಶಾಲೆಯ 3.31 ಲಕ್ಷ, ಅನುದಾನಿತ ಶಾಲೆಯ 2.29 ಲಕ್ಷ ಹಾಗೂ ಅನುದಾನ ರಹಿತ ಶಾಲೆಯ 2.87 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 14,699 ಶಾಲೆಯಲ್ಲಿರುವ 4,48,560 ಬಾಲಕರು ಹಾಗೂ 3,99,643 ಬಾಲಕಿಯರಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ 2,879 ಇದ್ದ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿಯಾಗಿ 330 ಸೇರ್ಪಡೆ ಮಾಡಲಾಗಿದೆ. 1,246 ಮಾರ್ಗಾಧಿಕಾರಿ, 2,879 ಸ್ಥಾನಿಕ ಜಾಗೃತ ದಳ, 50,787 ಕೊಠಡಿ ಮೇಲ್ವಿಚಾರಕರು ಸೇರಿ 81,265 ಸಿಬ್ಬಂದಿ ಹಾಗೂ ಪೊಲೀಸ್‌, ಆರೋಗ್ಯ ಇಲಾಖೆ ಸೇರಿದಂತೆ 19,222 ಜಿಲ್ಲಾಮಟ್ಟದ ಅಧಿಕಾರಿಗಳು ಪರೀಕ್ಷಾ ಕಾರ್ಯಕ್ಕಾಗಿ ನೇಮಿಸಲಾಗಿದೆ.

'ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಬರೆಯಲು ಅವಕಾಶವಿಲ್ಲ'

ಭದ್ರತಾ ಕಾರ್ಯಗಳು:

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 7,115 ಥರ್ಮಲ್‌ ಸ್ಕ್ರೀನಿಂಗ್‌ ಕೇಂದ್ರ, ಜಿಲ್ಲಾ ಕೇಂದ್ರದಲ್ಲಿ 34 ಸಹಾಯವಾಣಿ ಕೇಂದ್ರ, ತಾಲೂಕು ಕೇಂದ್ರದಲ್ಲಿ 204 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 9 ಲಕ್ಷ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.