ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು, (ಜೂನ್.11): ರಾಜ್ಯದಲ್ಲಿ ಪುಟ್ಟ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್‌ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ 7ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣವನ್ನು ಗುರುವಾರ ರದ್ದುಗೊಳಿಸಿದೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಆನ್ ಲೈನ್ ಶಿಕ್ಷಣದ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆನ್ ಲೈನ್ ಶಿಕ್ಷಣವನ್ನು 5ನೇ ತರಗತಿ ಬದಲು 7ನೇ ತರಗತಿವರೆಗೂ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
LKG ಯಿಂದ ೫ ನೇ ತರಗತಿವರೆಗೆ ಆನ್ಲೈನ್ ಪಾಠ ಇಲ್ಲ
ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ನಂತರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಇಂದು ಅದನ್ನು 7ನೇ ತರಗತಿವರೆಗೂ ಸರ್ಕಾರ ವಿಸ್ತರಿಸಿದೆ.
ಇನ್ನು ಈ ಆಲ್‌ಲೈನ್ ಶಿಕ್ಷಣಕ್ಕೆ ವಿರೋಧ ಪಕ್ಷಗಳು ವಿರೋಧಿಸಿದ್ದವು. ಕೇವಲ 7ನೇ ತರಗತಿ ವರೆಗೆ ಮಾತ್ರವಲ್ಲ. ಹತ್ತನೇ ಕ್ಲಾಸ್ ವರೆಗೂ ಆನ್ಲೈನ್ ಶಿಕ್ಷಣ ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
