ಬೆಂಗಳೂರು (ಮಾ. 29): ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ಯಾವ ಕೋರ್ಸ್‌, ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಸುದ್ದಿವಾಹಿನಿ ಮಾ.30 ಮತ್ತು 31 ರಂದು ಎಜುಕೇಷನ್‌ ಎಕ್ಸ್‌ ಪೋ ಆಯೋಜಿಸಿದೆ.

ಜಯನಗರ ‘ಟಿ’ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ನಟಿ ಪ್ರಣಿತಾ ಸುಭಾಷ್‌, ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್‌ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಎಕ್ಸ್‌ ಪೋದಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದ ವಿವಿಧೆಡೆ ಇರುವ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿವೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಕ್ಸ್‌ ಪೋ ಆಯೋಜಿಸಲಾಗಿದೆ. ಕಾಲೇಜು, ಕೋರ್ಸ್‌ಗಳು, ಕಾಲೇಜಿನ ಬೋಧಕ ವರ್ಗ, ಮೂಲ ಸೌಕರ್ಯಗಳು, ಪ್ರಯೋಗಾಲಯ, ಕಾಲೇಜು ಕ್ಯಾಂಪಸ್‌, ಕಾಲೇಜಿನ ವಿಶೇಷತೆಗಳ ಜತೆಗೆ ತಮಗಿರುವ ಗೊಂದಲಗಳನ್ನು ಬಗೆಹರಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಬಳಕೆ ಮಾಡಿಕೊಳ್ಳಬಹುದು.

ಎಕ್ಸ್‌ ಪೋ ಕುರಿತು ಗುರುವಾರ ಸುವರ್ಣ ನ್ಯೂಸ್‌ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೆಂಕಟೇಶ್ವರ ಎಂಜಿನಿಯರಿಂಗ್‌ ಕಾಲೇಜಿನ ಡೀನ್‌ ಡಾ. ರಾಜಕುಮಾರ್‌ ಎಚ್‌.ಡಿ., ರೇವಾ ವಿಶ್ವ ವಿಶ್ವವಿದ್ಯಾಲಯ ಕುಲಪತಿ ಎಸ್‌.ವೈ. ಕುಲಕರ್ಣಿ ಮತ್ತು ಅಮೃತ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ನ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ. ರಶ್ಮಿ ತಮ್ಮ ಕಾಲೇಜುಗಳ ವಿಶೇಷತೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜಕುಮಾರ್‌, ಸಂಶೋಧನೆ, ಆವಿಷ್ಕಾರ, ಸ್ಟಾರ್ಟ್‌ ಅಪ್‌ ಆರಂಭಿಸುವವರಿಗೆ, ಕೌಶಲ್ಯಾಧಾರಿತ ಕೋರ್ಸ್‌, ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಹತ್ತಾರು ಸಂಶೋಧನಗಳಿಗೆ ಆದ್ಯತೆ ನೀಡಲಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಬೇಸಿಕ್‌ ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಕಲಿಸುವುದಕ್ಕಾಗಿ ಸಿಬ್ಬಂದಿಯನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳು ಅಂಕ ಗಳಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳ ನಡವಳಿಕೆ, ಸಾಮಾನ್ಯ ಜ್ಞಾನವನ್ನು ಕೂಡ ಉದ್ಯೋಗ ನೀಡುವ ಸಂಸ್ಥೆಗಳು ಪರಿಗಣಿಸುತ್ತವೆ. ಇದಕ್ಕಾಗಿ ವಿವಿಧ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಕೂಡ ಸಂಪೂರ್ಣವಾಗಿ ಕಲಿಯಬೇಕು ಎಂಬು ಉದ್ದೇಶದಿಂದ ನಿಧಾನಗತಿಯಲ್ಲಿ ಕಲಿಯುವವರು ಮತ್ತು ವೇಗವಾಗಿ ಕಲಿಯುವವರಿಗಾಗಿ ಪ್ರತ್ಯೇಕವಾಗಿ ಬೋಧನಾ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವವರಿಗೆ ವಾರ್ಷಿಕ 12 ಲಕ್ಷ ರು.ವರೆಗಿನ ಪ್ಲೇಸ್‌ಮೆಂಟ್‌ ದೊರೆತಿದೆ ಎಂದು ಹೇಳಿದರು.

ರೇವಾ ವಿವಿ ಕುಲಪತಿ ಎಸ್‌.ವೈ. ಕುಲಕರ್ಣಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದಿನದಿಂದ ದಿನಕ್ಕೆ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ರೇವಾ ವಿಶ್ವವಿದ್ಯಾಲಯವು ವ್ಯಾಸಂಗ ಮಾಡುತ್ತಿರುವ ಅವಧಿಯಲ್ಲಿಯೇ ಉದ್ಯೋಗ ದೊರೆಯುವ ರೀತಿಯಲ್ಲಿ ತನ್ನದೇ ಪಠ್ಯಕ್ರಮ ಹೊಂದಿದೆ. ವಿದ್ಯಾರ್ಥಿಗಳ ಪ್ರಗತಿಗಾಗಿ ಕ್ರೀಡೆ, ಸಂಗೀತ ಸೇರಿದಂತೆ ವಿದ್ಯಾರ್ಥಿಗಳ ಇಷ್ಟವಾದ ಕೋರ್ಸ್‌ಗಳನ್ನು ಕೂಡ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಶೇ.100ರಷ್ಟುಪ್ಲೇಸ್‌ಮೆಂಟ್‌ ದೊರೆಯುತ್ತಿದ್ದು, ವಾರ್ಷಿಕ 24 ಲಕ್ಷ ರು. ವರೆಗೆ ಹತ್ತಾರು ಸಂಸ್ಥೆಗಳು ಉದ್ಯೋಗ ನೀಡುತ್ತಿವೆ ಎಂದು ಹೇಳಿದರು.

ತಮ್ಮ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಕೆಲಸ ಕೂಡ ವಿವಿ ಮಾಡುತ್ತಿದೆ. ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ಕಲಿಯುವುದಕ್ಕಾಗಿ ಬೇಕಾಗುವ ಎಲ್ಲ ರೀತಿಯ ವಾತಾವರಣವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅಮೃತ ಸ್ಕೂಲ್‌ ಎಂಜಿನಿಯರಿಂಗ್‌ನ ಡಾ. ರಶ್ಮಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮತ್ತು ನೇರವಾಗಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ವ್ಯವಹರಿಸುವ ಸಾಕಷ್ಟುಅವಕಾಶಗಳು ಮಾತಾ ಅಮೃತಾನಂದಮಯಿ ವಿಶ್ವವಿದ್ಯಾಲಯದಲ್ಲಿವೆ. ವಿದ್ಯಾರ್ಥಿಗಳಿಗೆ ಕೋರ್ಸ್‌ ಮತ್ತು ಕೌಶಲ್ಯತೆ ಬಗ್ಗೆ ಸಾಕಷ್ಟುಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಸೃಜನಶೀಲತೆಗೆ, ಆವಿಷ್ಕಾರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪಾಲ್ಗೊಳ್ಳುವ ವಿವಿಗಳು

ರೇವಾ, ಗೀತಂ, ಪಿಇಎಸ್‌, ರಾಮಯ್ಯ ಮತ್ತು ಪ್ರೆಸಿಡೆನ್ಸಿ

ಕಾಲೇಜುಗಳು

ಕೇಂಬ್ರಿಡ್ಜ್‌, ಆಕ್ಸ್‌ಫರ್ಡ್‌, ಕಮ್ಯೂನಿಟಿ ಗ್ರೂಫ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಕೃಪಾನಿಧಿ ಗ್ರೂಫ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಎಕ್ಸೆಲ್‌ ಅಕಾಡೆಮಿಕ್ಸ್‌, ವಿಷನ್‌ ಪಿಯು ಕಾಲೇಜು, ಅಮೃತ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಐಎಫ್‌ಐಎಂ

ಶಾಲೆಗಳು

ಕುಣಿಗಲ್‌ ವ್ಯಾಲ್ಯೂ ರೆಸಿಡೆನ್ಷಿಯಲ್‌ ಸ್ಕೂಲ್‌

ಜ್ಞಾನ ಸರೋವರ, ಮೈಸೂರು

ಪ್ರೊಫೆಷನಲ್‌ ಇನ್‌ಸ್ಟಿಟ್ಯೂಷನ್ಸ್‌

ಬೆಂಗಳೂರು ಸ್ಟಡಿ ಡಾಟ್‌ ಕಾಂ.