ಹೊಸದಿಲ್ಲಿ (ಜು.04): ಬ್ಯಾಂಕಿಂಗ್ ನೇಮಕಾತಿಗೆ ನಡೆಯುವ ಅರ್ಹತಾ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕೆಂಬ ಕನ್ನಡಿಗರ ಬಹುದಿನದ ಬೇಡಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅಸ್ತು ಎಂದಿದ್ದಾರೆ. ಆ ಮೂಲಕ ಕರುನಾಡ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌(RRB)ಗಳ ನೇಮಕಾತಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪರೀಕ್ಷೆ ನಡೆಸುತ್ತಿದೆ. ಇದುವರೆಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಡೆಯುತ್ತಿದ್ದ ಪರೀಕ್ಷೆ ಇನ್ನು ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಯಲಿದೆ ಎಂದು ನಿರ್ಮಲಾ ಸಂಸತ್ತಿನಲ್ಲಿ ಘೋಷಿಸಿದ್ದಾರೆ. 

 

 

ಕನ್ನಡದೊಂದಿಗೆ ಅಸ್ಸಾಂ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿಯೂ ಇನ್ನು ಬ್ಯಾಂಕಿಂಗ್ ಉದ್ಯೋಗ ಪಡೆಯಲು ಅರ್ಹತಾ ಪರೀಕ್ಷೆ ಬರೆಯಬಹುದೆಂದು ನಿರ್ಮಲಾ ಹೇಳಿದರು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡಗಿರಿಗೆ ಉದ್ಯೋಗ: ತೇಜಸ್ವಿ ಆಗ್ರಹ

ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕೆಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿ ರಾಜ್ಯದ ಇತರೆ ಸಂಸದರು ನಿರ್ಮಲಾ ಅವರನ್ನು ಆಗ್ರಹಿಸಿ, ಮನವಿ ಪತ್ರ ಸಲ್ಲಿಸಿದ್ದರು. ಈ ಬೆನ್ನಲ್ಲೇ RRBಯ ಸ್ಕೇಲ್-1 ಮತ್ತು ಕಚೇರಿ ಸಹಾಯಕ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೂ ಇನ್ನು ಪರೀಕ್ಷೆ ನಡೆಯುತ್ತದೆ. ಇದುವರೆಗೆ ಹಿಂದಿ ಹಾಗೂ ಇಂಗ್ಲಿಷ್ ಗೊತ್ತಿರದ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದ್ದರು. ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಇದ್ದರೆ ಹಲವರು ಬ್ಯಾಂಕಿಂಗ್ ಉದ್ಯೋಗ ಪಡೆಯಲು ಅರ್ಹರಾಗಬಹುದೆಂಬ ದೃಷ್ಟಿಯಿಂದ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ನಡೆಸಬೇಕೆಂಬ ಕೂಗು ಕೇಳಿ ಬಂದಿತ್ತು.