ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ: ಕಲಿಕಾ ಮಟ್ಟದಲ್ಲಿ ನಾವೇ ಬೆಸ್ಟ್!

First Published 1, Aug 2018, 11:17 AM IST
Educational Revolution in the State: Learning Level high in Karnataka
Highlights

ಕರ್ನಾಟಕದಲ್ಲಿ ಸದ್ದಿಲ್ಲದೇ ಶೈಕ್ಷಣಿಕ ಕ್ರಾಂತಿ

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಮೀಕ್ಷೆ

ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಮಟ್ಟ ಉತ್ತಮ

ಪ್ರಾಥಮಿಕ ಶಿಕ್ಷಣದ ಸುಧಾರಣೆಯಲ್ಲೂ ದಾಪುಗಾಲು

ಗಣಿತ ಹಾಗೂ ವಿಜ್ಞಾನದ ಕಲಿಕೆಯಲ್ಲೂ ನಾವೇ ಬೆಸ್ಟ್
 

ಬೆಂಗಳೂರು(ಆ.1): ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ನಡೆಸಿದ ಇತ್ತೀಚಿನ ಎರಡು ಪ್ರತ್ಯೇಕ ಶೈಕ್ಷಣಿಕ ಸಮೀಕ್ಷೆಗಳಲ್ಲಿ ಕರ್ನಾಟಕವು ದೇಶದಲ್ಲೇ ಮುಂದಿರುವುದು ನಮ್ಮ ರಾಜ್ಯದ ಶೈಕ್ಷಣಿಕ ಪ್ರಗತಿಯ ವಿಚಾರದಲ್ಲಿ ಮಹತ್ವದ ಮೈಲುಗಲ್ಲು. 

ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲೇ ಕರ್ನಾಟಕದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ಅನುಪಾತ ಅತ್ಯುತ್ತಮವಾಗಿರುವುದು ಪತ್ತೆಯಾಗಿತ್ತು. ದೇಶದಲ್ಲಿ ಸರಾಸರಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದರೆ ಕರ್ನಾಟಕದಲ್ಲಿ 16 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರುವುದು ತಿಳಿದುಬಂದಿತ್ತು. 

ಇದು ನಿಸ್ಸಂಶಯವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮುಂದಡಿಯಿಡುತ್ತಿರುವುದರ ಸೂಚನೆ. ಈಗ ಮಾನವ ಸಂಪನ್ಮೂಲ ಸಚಿವಾಲಯವು ಕಳೆದ ವರ್ಷ ದೇಶಾದ್ಯಂತ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳ ಕಲಿಕಾ ಮಟ್ಟ ಹೇಗಿದೆ ಎಂಬ ಬಗ್ಗೆ ನಡೆಸಿದ್ದ ಸಮೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ, ಕರ್ನಾಟಕವು ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಮಟ್ಟದಲ್ಲಿ ದೇಶದಲ್ಲೇ ನಂ.೧ ಸ್ಥಾನ ಗಳಿಸಿದೆ. 

ಇದು ಪ್ರಾಥಮಿಕ ಶಿಕ್ಷಣದ ಸುಧಾರಣೆಯಲ್ಲೂ ಕರ್ನಾಟಕ ದಾಪುಗಾಲಿಡುತ್ತಿದೆ ಎಂಬುದಕ್ಕೆ ನಿದರ್ಶನ. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಗಳ ನಿರಂತರ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಈ ಎರಡೂ ಇಲಾಖೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದವರು ಅಭಿನಂದನೆಗೆ ಯೋಗ್ಯರು.

ಉನ್ನತ ಶಿಕ್ಷಣದ ವಿಚಾರದಲ್ಲಿ ದೇಶಾದ್ಯಂತ ವರ್ಷದಿಂದ ವರ್ಷಕ್ಕೆ ಸಣ್ಣ ಪ್ರಮಾಣದ ಪ್ರಗತಿ ಮಾತ್ರ ಆಗುತ್ತಿದೆ. ಈಗಲೂ ನಮ್ಮಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಜಾಗತಿಕ ಸರಾಸರಿಗೆ ಹೋಲಿಸಿದರೆ ಕಡಿಮೆಯೇ ಇದೆ. ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವ ಪ್ರಮಾಣ ಹೆಚ್ಚಳವಾಗುತ್ತಿರುವುದೊಂದು ಆಶಾದಾಯಕ ಬೆಳವಣಿಗೆ. 

ಆದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಪ್ರಮಾಣ ಐದು ವರ್ಷದ ಹಿಂದೆ ಶೇ.50ರಷ್ಟು ಇದ್ದುದು ಈಗ ಶೇ.45ಕ್ಕೆ ಕುಸಿದಿದೆ. ಇದು ಆತಂಕಕಾರಿ ವಿಚಾರ. ಈ ಕ್ಷೇತ್ರದಲ್ಲಿ ಜಾತಿ ಆಧಾರದ ತಾರತಮ್ಯದಿಂದ ಆಗುತ್ತಿರುವ ತೊಂದರೆಗಳ ನಿವಾರಣೆಯಿಂದ ಹಿಡಿದು ಗುಣಮಟ್ಟದ ಬೋಧನೆಯವರೆಗೆ ಆಗಬೇಕಾದ ಕೆಲಸಗಳು ಸಾಕಷ್ಟಿವೆ. 

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ವಿಚಾರಕ್ಕೆ ಬಂದರೆ, ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಧನಾ ಸಮೀಕ್ಷೆಯಡಿ ನಡೆಸಿದ ಕಲಿಕಾ ಮಟ್ಟದ ಪರೀಕ್ಷೆಯಲ್ಲಿ ಕರ್ನಾಟಕದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೊದಲ ಸ್ಥಾನದಲ್ಲಿದ್ದಾರೆ. ದೇಶಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. 

3, 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿ ಅವರ ಕಲಿಕಾ ಮಟ್ಟ ಅಳೆಯಲಾಗಿದೆ. 3 ಮತ್ತು 5ನೇ ಕ್ಲಾಸ್ ವಿದ್ಯಾರ್ಥಿಗಳ ವಿಭಾಗದಲ್ಲಿ ನಮ್ಮ ರಾಜ್ಯ ನಂ.1 ಸ್ಥಾನದಲ್ಲೂ, 8ನೇ ಕ್ಲಾಸ್ ವಿದ್ಯಾರ್ಥಿಗಳ ವಿಭಾಗದಲ್ಲಿ ನಂ.2 ಸ್ಥಾನದಲ್ಲೂ ಇದೆ. ಮೇಲುಮೇಲಿನ ತರಗತಿಗೆ ಹೋಗುತ್ತಿದ್ದಂತೆ ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿದೆ ಎಂಬ ಕಳವಳಕಾರಿ ಅಂಶವೂ ಇದರಲ್ಲಿದೆ.

ಬಹುಮುಖ್ಯ ವಿಚಾರವೆಂದರೆ, ಮಕ್ಕಳಿಗೆ ಅತ್ಯಂತ ಕ್ಲಿಷ್ಟಕರವಾದ ಗಣಿತ ಹಾಗೂ ವಿಜ್ಞಾನದ ಕಲಿಕೆಯಲ್ಲೂ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ. ಆದರೆ, ಇಂಗ್ಲಿಷ್ ಕಲಿಕೆ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಸಮಸ್ಯೆಯೇ ಆಗುಳಿದಿದೆ. ಅದರ ಜೊತೆಗೆ, 20 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಇಬ್ಬರಿಗಿಂತ ಕಡಿಮೆ ಶಿಕ್ಷಕರಿದ್ದಾರೆ. 

ಇದು ಗಮನಹರಿಸಲೇಬೇಕಾದ ಸಮಸ್ಯೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಸದ್ಯಕ್ಕೆ ಕೈಬಿಟ್ಟಿರುವುದಾಗಿ ಹೇಳಿದ್ದರೂ, ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಪಕ್ಕದ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಐದಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಇಂತಹ ಒಂದಷ್ಟು ಋಣಾತ್ಮಕ ಸಂಗತಿಗಳನ್ನು ನೀಗಿಕೊಂಡರೆ ಶೈಕ್ಷಣಿಕ ಸುಧಾರಣೆಯಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನಕ್ಕೆ ಬಂದಿರುವ ಕರ್ನಾಟಕ ಇನ್ನಷ್ಟು ಪ್ರಗತಿ ಸಾಧಿಸಲು ಅವಕಾಶಗಳಿವೆ.

loader