ಬೆಂಗಳೂರು/ಹೊಸದುರ್ಗ[ಏ. 30]: ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೂ ಸ್ವಲ್ಪವೂ ಓದದೇ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇಲ್ಲವೇ ಶೇ.99 ಅಂಕ ಪಡೆದರೂ ಎರಡು ಅಂಕಗಳು ಕಮ್ಮಿಯಾಯಿತೆಂದು ಆತ್ಮಹತ್ಯೆಗೆ ಶರಣಾಗುವವರಿದ್ದಾರೆ. ಇಂಥ ಎಲ್ಲ ಮಕ್ಕಳಿಗೂ ಸ್ಫೂರ್ತಿಯಾಗುವಂಥ ಸುಶ್ರಾವ್ಯ ಎಂಬ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿನಿಯ ಯಶೋಗಾಥೆಯಿದು.

ಹೊಸದುರ್ಗದ ಸುಶ್ರಾವ್ಯ ಡೌನ್ ಸಿಂಡ್ರೋಮ್ ಬಾಧಿತಳು. ಕಲಿಕಾ ದೌರ್ಬಲ್ಯ ಹೊಂದಿರುವ ಈಕೆ SSLC ಪರೀಕ್ಷಾ ಮಂಡಳಿ ನೀಡುವ ವಿನಾಯತಿ ಅಡಿ ಪರೀಕ್ಷೆ ಬರೆದು ಶೇ. 80 ಅಂಕ ಗಳಿಸಿದ್ದಾಳೆ. ಆ ಮೂಲಕ ಎಲ್ಲರಿಗೂ ಜೀವನದ ಅತಿ ಮುಖ್ಯ ಪಾಠ ಹೇಳಿಕೊಟ್ಟು, ಜೀವನದಲ್ಲಿ ಸಾಧನೆಗೆ ದೈಹಿಕ ಅಥವಾ ಮಾನಸಿಕ ನ್ಯೂನತೆ ಕಾರಣವಲ್ಲ. ಬದಲಾಗಿ ಶ್ರಮವೊಂದೇ ಸಾಧನೆಗೆ ಮಾನದಂಡ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಬಾಲಕಿಯ ಸಾಧನೆ ಹಿಂದೆ ಸಹಜವಾಗಿಯೇ ತಾಯಿ ರೇಖಾ ನವೀನ್ ಕುಮಾರ್, ತಂದೆ ನವೀನ್ ಕುಮಾರ್ ಅವರ ಪರಿಶ್ರಮವಿದೆ.

ಕಲಿಕಾ ಕ್ರಮ ಹೇಗೆ?

ಇಂಥ ಮಕ್ಕಳಿಗೆ ಕಲಿಸುವ ಕ್ರಮವೂ ಭಿನ್ನವಾಗಿರುತ್ತದೆ. ಬಾಲಕಿಗೆ ಅರ್ಥವಾಗುವ ರೀತಿಯಲ್ಲಿ ಉದಾಹರಣೆಗಳ ಮೂಲಕ ಮನೆಯಲ್ಲಿ ನಿರಂತರ ಪಾಠ ಮಾಡಬೇಕು. ಬೇರೆ ಮಕ್ಕಳಿಗೆ ಒಮ್ಮೆ ಹೇಳಿಕೊಡುವುದನ್ನು ಇಂಥ ಮಕ್ಕಳಿಗೆ ನಾಲ್ಕು ಬಾರಿ ಹೇಳಿಕೊಟ್ಟು ಮನನ ಮಾಡಿಸುವುದು ಮುಖ್ಯ.ಆದರೆ, ಶಾಲೆಯಲ್ಲಾಗಲಿ, ಸರಕಾರದಿಂದಾಗಲಿ ಇಂಥ ಮಕ್ಕಳಿಗೆ ವಿಶೇಷ ತರಬೇತು ನೀಡುವ ವ್ಯವಸ್ಥೆ ಇಲ್ಲ. ಶಾಲೆಯ ಸಹಕಾರದೊಂದಿಗೆ ಪೋಷಕರ ಪರಿಶ್ರಮದಿಂದ ಮಾತ್ರ ಇಂಥ ಮಕ್ಕಳು ಗುರಿ ತಲುಪಬಹುದು ಅಷ್ಟೇ.

ಇಂಥ ಮಕ್ಕಳಿಗೆ ಕೆಲವು ವಿನಾಯತಿ ಪಡೆಯುವ ಅವಕಾಶವಿರುತ್ತದೆ. ನಿಯಮಾನುಸಾರ ಅಂಥ ವಿಶೇಷ ಸೌಲಭ್ಯವನ್ನು ಶಿಕ್ಷಣ ಮಂಡಳಿಯಿಂದ ಪಡೆಯಲಾಗಿತ್ತು. ಆದರೆ, ಯಾವುದೇ ರೀತಿಯ ಕೀಳರಿಮೆ ಬಾರದಂತೆ ಶಾಲೆಯಲ್ಲಿ ನಿಗಾ ವಹಿಸುವುದು ಬಹಳ ಮುಖ್ಯವಾಗಿದ್ದು, ಸುಶ್ರಾವ್ಯ ಓದಿದ ಶಾಲೆಯಲ್ಲಿ ಅಷ್ಟು ನಿಗಾ ವಹಿಸಿದ್ದಕ್ಕೆ ಪೋಷಕರು ಚಿರಋಣಿ.

"

HDK ಬಳಿಯೇ ಶಿಕ್ಷಣ ಖಾತೆ, ಹಾಸನ ಫಸ್ಟ್, ರಾಮನಗರ ಸೆಕೆಂಡ್!

LKGಯಿಂದಲೂ ಹೊಸದುರ್ಗದ ಕೊಬ್ಬರಿಪೇಟೆಯ SDA ಶಾಲೆಯಲ್ಲಿ ಕಲಿತ ಸುಶ್ರಾವ್ಯ ಅಲ್ಲಿನ ಆಡಳಿತ ವರ್ಗ ಹಾಗೂ ಶಿಕ್ಷಕರು ತೋರಿಸುತ್ತಿದ್ದ ವಿಶೇಷ ಕಾಳಜಿ, ಸೂಕ್ಷ್ಮ ಸ್ಪಂದನೆಯಿಂದ ಯಾವುದೇ ಕೀಳರಿಮೆ ಇಲ್ಲದೇ 10ನೇ ತರಗತಿಯವರೆಗೂ ಪಾಸಾಗಿ, SSLCಯನ್ನು ಮೊದಲ ದರ್ಜೆಯಲ್ಲಿ ಪಾಸ್ ಮಾಡಿದ್ದಾಳೆ. ವಿನಾಯಿತಿ ಸೌಲಭ್ಯ ಪಡೆಯುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳೂ ವಿಶೇಷ ಸಹಕಾರ ನೀಡಿದ್ದಾರೆ, ಎನ್ನುತ್ತಾರೆ ಸುಶ್ರಾವ್ಯ ಪೋಷಕರು.

ರಾಜ್ಯದಲ್ಲಿ ಇಂಥ ಮಕ್ಕಳು ಪರೀಕ್ಷೆ ಬರೆದಿದ್ದು ಎಷ್ಟು?

 ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರಾಜ್ಯದ್ಯಾಂತ ವಿಭಿನ್ನ ಸಾಮರ್ಥ್ಯವುಳ್ಳ ಒಟ್ಟು 3683 ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 2494 ಮಕ್ಕಳು ಪಾಸ್ ಆಗಿದ್ದು, ಶೇ. 67.71 ಸಾಧಿಸಿದ್ದಾರೆ. ಇಂಥ ಮಕ್ಕಳ ಕಲಿಕೆಯ ಹೆಚ್ಚಿನ ಜವಾಬ್ದಾರಿ ಪೋಷಕರದ್ದೇ ಆಗಿರುತ್ತದೆ. ತರಬೇತಿ ನೀಡುವುದು ಆಯಾ ಶಾಲೆ ಮತ್ತು ಪೋಷಕರಿಗೆ ಸಂಬಂಧಿಸಿದ ವಿಚಾರ ಎನ್ನುತ್ತಾರೆ, ಸುವರ್ಣನ್ಯೂಸ್.ಕಾಮ್‌ನೊಂದಿಗೆ ಮಾತನಾಡಿದ ಪ್ರೌಢ ಶಿಕ್ಷಣ ಬೋರ್ಡ್ ನಿರ್ದೇಶಕಿ ಸುಮಂಗಲಾ. 

SSLC ಫಲಿತಾಂಶ ಪ್ರಕಟ, ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

ವಿಶೇಷ ಸಾಮರ್ಥ್ಯವುಳ್ಳ ಮಕ್ಕಳೆಂದರೆ ಯಾರು?

ಕಲಿಕಾ ದೌರ್ಬಲ್ಯ ಹೊಂದಿರುವ ಮಕ್ಕಳು ಡಿಸ್ಲೆಕ್ಸಿಯಾ, ಆಟಿಸಂ, ಸೆರೆಬ್ರಲ್ ಪಾಲಸಿ, ಡೌನ್ ಸಿಂಡ್ರೋಮ್ ಮುಂತಾದ ಸಮಸ್ಯೆಗಳಿಂದ ಹುಟ್ಟಿನಿಂದಲೇ ಬಳಲುತ್ತಿರುತ್ತಾರೆ. ಇವರ ಬುದ್ಧಿಮತ್ತೆ ಗುಣಾಂಕ ಐಕ್ಯೂ ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಇರುತ್ತದೆ. ಇಂತಹ ಮಕ್ಕಳಿಗೆ ಬಾಲ್ಯದಿಂದಲೇ ವಿಶೇಷ ತರಬೇತಿ, ಪ್ರೋತ್ಸಾಹ ಅಗತ್ಯ. ಅನುಕಂಪಕ್ಕಿಂತ ಸಮಸ್ಯೆಯನ್ನು ಅವರ ಜಾಗದಲ್ಲಿ ನಿಂತು ನೋಡುವ ಅನುಭೂತಿ ಬೇಕು. ಇಂಥ ಮಕ್ಕಳ ವೈದ್ಯಕೀಯ ಪರೀಕ್ಷೆ ಹಾಗೂ ಬುದ್ಧಿಮತ್ತೆ ಪರೀಕ್ಷೆಗಳನ್ನು ಮೈಸೂರಿನ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಬೆಂಗಳೂರಿನ ನಿಮ್ಹಾನ್ಸ್ ಮುಂತಾದ ಸಂಸ್ಥೆಗಳಲ್ಲಿ ಮಾಡಿಸಿ ಪ್ರಮಾಣ ಪತ್ರ ಪಡೆಯಬೇಕು. ಅದನ್ನು ಡಿಡಿಪಿಐ ಕಚೇರಿ ಮೂಲಕ SSLC ಮಂಡಳಿಗೆ ಸಲ್ಲಿಸಿ, ಭಾಷಾ ವಿನಾಯಿತಿ ಪಡೆಯಬಹುದು. ಕಲಿಕಾ ಮಾಧ್ಯಮದ ಭಾಷೆ ಹೊರತು ಪಡಿಸಿ, ಇನ್ನೆರಡು ಭಾಷೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ.

ಅಧ್ಯಯನ ಮಾಡುತ್ತಿದ್ದ ಹೊಸದುರ್ಗದ ಎಸ್‌ಡಿಎ ಶಾಲೆಯ ಎಲ್ಲ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ತಾಯಿ ರೇಖಾರವರ ಪ್ರಾಮಾಣಿಕ ತರಬೇತಿ ಫಲವೇ ಈ ಸಾಧನೆಗೆ ಮೂಲ ಕಾರಣ.
- ನವೀನ್ ಕುಮಾರ್, ಸುಶ್ರಾವ್ಯ ತಂದೆ

ನನ್ನದಷ್ಟೇ ಅಲ್ಲ ಜೊತೆಗೆ ನನ್ನ ಗಂಡ ನವೀನರ ಪರಿಶ್ರಮದಿಂದ ಮಾತ್ರ ಈ  ಸಾಧನೆ ಸಾಧ್ಯವಾಯಿತು ಎಂಬುದೇ ನಮ್ಮ ಹೆಮ್ಮೆ, ಅಂತಹ ತಂದೆ ಪಡೆದ ಅವಳೇ ಧನ್ಯಳು.
-ರೇಖಾ ನವೀನ್ ಕುಮಾರ್, ಸುಶ್ರಾವ್ಯ ಅಮ್ಮ