ಬೆಂಗಳೂರು :  ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ)ಯ 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿ ಡಿ.ಯಶಸ್‌ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ.

500ಕ್ಕೆ 498 ಅಂಕ ಗಳಿಸುವ ಮೂಲಕ ಕರ್ನಾಟಕವಷ್ಟೇ ಅಲ್ಲದೆ, ದಕ್ಷಿಣ ಪ್ರಾದೇಶಿಕ (ಚೆನ್ನೈ) ವಲಯಕ್ಕೆ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಲ್ಲದೆ, 498 ಅಂಕ ಗಳಿಸಿ ದ್ವಿತೀಯ ಸ್ಥಾನಿಗಳು ಎನಿಸಿಕೊಂಡ ದೇಶದ 24 ವಿದ್ಯಾರ್ಥಿಗಳ ಸಾಲಿಗೆ ಸೇರಿಕೊಂಡಿದ್ದಾನೆ.

ಚೆನ್ನೈ ವಲಯ ನಂ.2: ಒಟ್ಟಾರೆ ಚೆನ್ನೈ ವಲಯದಲ್ಲಿ 2,21,178 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,20,715 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.99 ಫಲಿತಾಂಶ ಪಡೆಯವ ಮೂಲಕ ದೇಶದಲ್ಲಿ ದ್ವಿತೀಯ ಸ್ಥಾನವನ್ನು ಚೆನ್ನೈ ವಲಯ ಪಡೆದಿದೆ. ಕಳೆದ ಬಾರಿ (ಶೇ.97.37) ಗಿಂತ ಶೇ.1.63 ಫಲಿತಾಂಶ ಹೆಚ್ಚಳವಾಗಿದೆ. ಶೇ.99.39 ವಿದ್ಯಾರ್ಥಿನಿಯರು ಮತ್ತು ಶೇ.98.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.99.85 ಅಂಕ ಗಳಿಸುವ ಮೂಲಕ ತಿರುವನಂತಪುರ ಮೊದಲ ಸ್ಥಾನ ಪಡೆದಿದೆ.

ಧಾರವಾಡದ ಶ್ರೀ ಮಂಜುನಾಥೇಶ್ವರ ಕೇಂದ್ರ ಶಾಲೆಯ ವಿದ್ಯಾರ್ಥಿನಿ ಗಿರಿಜಾ ಎಂ. ಹೆಗಡೆ ಹಾಗೂ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಹರಿಹರನ್‌ 497 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ವಿದ್ಯಾನಿಕೇತನ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ಪೃಥ್ವಿ ಪಿ.ಶೆಣೈ ಮತ್ತು ಬೆಂಗಳೂರಿನ (ಜೆ.ಪಿ.ನಗರ) ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಕೆ.ವಿ.ಪ್ರಣವ್‌ 497 ಅಂಕ ಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಚೆನ್ನೈ ಪ್ರಾದೇಶಿಕ ಕೇಂದ್ರದ ಟಾಪರ್‌ ಆಗಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಸಚಿವ ದಿ. ಸಿ.ಎಸ್‌.ಶಿವಳ್ಳಿ ಅವರ ಮಗಳು ರೂಪಾ ಸಿಬಿಎಸ್‌ಇಯಲ್ಲಿ ಶೇ.91 ಅಂಕ ಗಳಿಸಿದ್ದಾಳೆ. ತಂದೆ ಸಾವಿನ ದಿನವೇ ಮಗಳು ಪರೀಕ್ಷೆಗೆ ಹಾಜರಾಗಿದ್ದಳು. ಐಟಿಪಿಎಲ್‌ ಐಕ್ಯ ಶಾಲೆ ವಿದ್ಯಾರ್ಥಿಗಳಾದ ಯತಿ ಸಾಮಂತ್‌ ರೇ ಶೇ.96.8, ಶೀತಲ್‌ ಶರ್ಮಾ ಶೇ.95.2, ವೈ.ರಿತ್ವಿ ಗೋವರ್ಧನ ರಾವ್‌ ಶೇ.95, ಆನಂದಿತ ಕೊಟ್ಟಿಸಾ ಶೇ.94.6, ಇಶಾಂಕ್‌ ಭಟ್ನಾಗರ್‌ ಶೇ.94.6, ಸುಮಿನ್‌ ಮಿನಿ ಶೇ.94.4 ಅಂಕ ಗಳಿಸಿದ್ದಾರೆ.

ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಣಿ ಕಾಲೇಜಿನ ಪ್ರೊಫೆಸರ್‌ ಎ.ಸಿ. ಮಂಜುಳ ಅವರ ಮಗ ಸಿದ್ದಾಥ್‌ರ್‍ 402 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಅಂದಿನ ಪಾಠವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಪಾಠ ಮಾಡುವಾಗ ಅರ್ಥವಾಗದ್ದನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಂಡ ಬಳಿಕ ಮನೆಗೆ ಹೋಗುತ್ತಿದ್ದೆ. ಪೋಷಕರು ಕೂಡಾ ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮೂವರು ಸಹಪಾಠಿಗಳು ಚರ್ಚಿಸುತ್ತಿದ್ದೆವು. ಬಿಡುವಿನ ವೇಳೆಯಲ್ಲಿ ಚೆಸ್‌ ಆಡುವ ಮೂಲಕ ರಿಲ್ಯಾಕ್ಸ್‌ ಮಾಡಿಕೊಳ್ಳುತ್ತಿದ್ದೆ. ಶಾಲೆ ಮತ್ತು ಮನೆಯಲ್ಲಿನ ಕಲಿಕಾ ವಾತಾವರಣ ಸಾಧನೆಗೆ ಸಹಕಾರಿಯಾಯಿತು.

- ಯಶಸ್‌ ಡಿ., 10ನೇ ತರಗತಿ ಮೊದಲ ಸ್ಥಾನ, ಹುಳಿಯಾರು

ಪರೀಕ್ಷೆಗಾಗಿ ವೇಳಾಪಟ್ಟಿಸಿದ್ಧಪಡಿಸಿಕೊಂಡು ಓದಲಿಲ್ಲ. ಹೆಚ್ಚಿನ ಅಂಕ ಗಳಿಸಲು ಶಾಲೆಯ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನದಿಂದ ಸಾಧ್ಯವಾಯಿತು. ನನ್ನ ತಂದೆ ಎಂಜಿನಿಯರ್‌, ತಾಯಿ ಗೃಹಿಣಿ. ನಾನು ಮುಂದೆ ಪಿಸಿಎಂಬಿ ವ್ಯಾಸಂಗ ಮಾಡಬೇಕೆಂದುಕೊಂಡಿದ್ದೇನೆ.

- ಕೆ.ವಿ.ಪ್ರಣವ್‌, ಶೇ.99.4

ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವ್ಯಾಸಂಗದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದೆ. ಓದಿನಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಈಗಾಗಲೇ ಒಂದು ಪುಸ್ತಕವನ್ನು ಕೂಡ ಬರೆದಿದ್ದೇನೆ. ವಿಜ್ಞಾನದಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ. ಹೀಗಾಗಿ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ.

- ಐಶ್ವರ್ಯ ಹರಿಹರನ್‌, ಶೇ.99.4