ಎನ್‌.ಎಲ್‌. ಶಿವಮಾದು

ಬೆಂಗಳೂರು(ಜೂ.01): ಕೊರೋನಾ ಸೋಂಕಿನಿಂದ ಅಂತರಾಜ್ಯ ಹಾಗೂ ವಿದೇಶಗಳಿಂದ ಆಗಮಿಸಿರುವ ಪೋಷಕರು ತಮ್ಮ ಮಕ್ಕಳನ್ನು ಬೆಂಗಳೂರಿನ ಶಾಲೆಗಳಲ್ಲಿಯೇ ಸೇರ್ಪಡೆ ಮಾಡಲು ಇಚ್ಛಿಸಿರುವ ಪರಿಣಾಮ ನಗರದ ಪ್ರತಿಷ್ಠಿತ ಶಾಲೆಗಳಲ್ಲಿನ ಸೀಟು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಮುಂದಿನ ಶೈಕ್ಷಣಿಕ ವರ್ಷಾರಂಭದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ತೆರೆಮರೆಯಲ್ಲಿ ಖಾಸಗಿ ಶಾಲೆಗಳನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ಸೀಟು ಬ್ಲಾಕ್‌ ಮಾಡಿಸುವ ಸಾಹಸಕ್ಕೆ ಪೋಷಕರು ಮುಂದಾಗಿದ್ದಾರೆ.

ವಿವಿಧ ಕಾರಣಗಳಿಗಾಗಿ ಮಾಚ್‌ರ್‍ ತಿಂಗಳಿನಲ್ಲಿ ರಾಜ್ಯಕ್ಕೆ ಆಗಮಿಸಿರುವ ಮತ್ತು ಕೊರೋನಾ ಸಮಸ್ಯೆ ಎದುರಾದ ನಂತರ ರಾಜ್ಯಕ್ಕೆ ಬಂದಿರುವ ಪೋಷಕರು ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿಯೇ ನೆಲೆಸಲು ನಿರ್ಧರಿಸಿದ್ದು, ತಾವು ನೆಲೆಸಿದ್ದ ಅಂತರಾಜ್ಯ ಹಾಗೂ ವಿದೇಶಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ‘ಬೆಂಗಳೂರು ಸುರಕ್ಷಿತ’ ಎನ್ನುವ ಮನಸ್ಥಿತಿಗೆ ಬಂದಿರುವುದರಿಂದ ತಮ್ಮ ಮಕ್ಕಳನ್ನು ನಗರದ ಶಾಲೆಗಳಲ್ಲಿಯೇ ಪ್ರವೇಶ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಆದರೆ, ನಮ್ಮ ದೇಶದ ಪಠ್ಯಕ್ರಮ ಹಾಗೂ ವಿದೇಶದಲ್ಲಿ ಅಧ್ಯಯನ ಮಾಡಿರುವ ಪಠ್ಯಕ್ರಮಗಳು ವಿಭಿನ್ನವಾಗಿರುತ್ತವೆ. ಎರಡನ್ನೂ ಹೊಂದಿಸಿ ಮಕ್ಕಳನ್ನು ಇಲ್ಲಿನ ವಾತಾವರಣಕ್ಕೆ ಹೊಂದಾಣಿಕೆ ಮಾಡಿಸುವುದು ಕಷ್ಟಕರವಾಗಲಿದೆ ಎಂದು ಹೇಳಿ ಕೆಲವು ಶಾಲೆಗಳು ಪ್ರವೇಶವನ್ನು ನಿರಾಕರಿಸುತ್ತಿವೆ.

ಈ ಕುರಿತು ಮಾತನಾಡಿದ ಖಾಸಗಿ ಶಾಲೆಯ ಪ್ರತಿನಿಧಿಯೊಬ್ಬರು, ಏಪ್ರಿಲ್‌ ಆರಂಭದಿಂದ ಶಾಲಾ ಸೀಟುಗಳ ಬೇಡಿಕೆ ಹೆಚ್ಚಾಗಿದೆ. ಭಾರತದ ಹೊರಗಡೆ ಇರುವ ನಮ್ಮ ಶಾಖೆಗಳ ಮೂಲಕ ಹಾಗೂ ಸ್ಥಳೀಯವಾಗಿಯೂ ಪೋಷಕರು ಶಾಲೆ ಬಳಿ ಬಂದು ಸೀಟುಗಳನ್ನು ವಿಚಾರಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಭಾರತದಿಂದ ಹೊರಗಡೆ ಇರುವ ನಮ್ಮ ಶಾಖೆಗಳಿಂದ ಭಾರತದ ಶಾಖೆಗಳಿಗೆ ವರ್ಗಾವಣೆ ಬಯಸುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅಗತ್ಯವೆನಿಸಿದರೆ ವಿದೇಶಿದಿಂದ ವಾಪಸ್ಸಾಗಲು ಬಯಸುವವರ ಸಮಸ್ಯೆ ಮತ್ತು ಬೇಡಿಕೆಗಳನ್ನು ಪರಿಹರಿಸಲು ವಿಭಾಗವೊಂದನ್ನು ತೆರೆಯುವ ಚಿಂತನೆಯಲ್ಲಿದ್ದೇವೆ. ಕೆಲವು ಪೋಷಕರು ವಸತಿ ಸೌಲಭ್ಯಗಳನ್ನು ಹೊಂದಿರುವ ಶಾಲೆಗಳನ್ನು ಹುಡುಕುತ್ತಿದ್ದಾರೆ. ಪ್ರವೇಶಕ್ಕಾಗಿ ಕೆಲವು ಪೋಷಕರಿಂದ ಕರೆಗಳು ಬರುತ್ತಿವೆ. ಆದರೆ, ಕೊರೋನಾ ನಿಯಂತ್ರಣವಾದ ಬಳಿಕ ಪ್ರವೇಶ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಲಾಗಿದೆ ಎಂದರು.

ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ (ಎನ್‌ಸಿಪಿ) ಅಧ್ಯಕ್ಷ ಕೆ.ಪಿ. ಗೋಪಾಲಕೃಷ್ಣ ಮಾತನಾಡಿ, ಪ್ರತಿ ದಿನ ಅನೇಕ ಪೋಷಕರು ತಮ್ಮನ್ನು ಸಂಪರ್ಕಿಸಿ ಸೀಟು ಕೇಳುತ್ತಿದ್ದಾರೆ. ಈ ಪೈಕಿ ಕೆಲವರು ವಿದೇಶಗಳಿಂದ ಹಾಗೂ ಮತ್ತೆ ಕೆಲವರು ಉತ್ತರ ಭಾರತ ರಾಜ್ಯಗಳಿಂದ ಬಂದವರಾಗಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದಿರುವ ಕಾರಣ ಪ್ರವೇಶ ಪ್ರಕ್ರಿಯೆಯನ್ನು ತಡೆ ಹಿಡಿದಿದ್ದೇವೆ. ಸರ್ಕಾರ ಅನುಮತಿ ನೀಡಿದ ಬಳಿಕ ನಮ್ಮನ್ನು ಸಂಪರ್ಕಿಸಿರುವ ಪೋಷಕರಿಗೆ ಸೀಟುಗಳನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಲಾಕ್‌ಡೌನ್‌ ವೇಳೆ ವಿದೇಶದಿಂದ ಬೆಂಗಳೂರಿಗೆ ಬಂದಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರವೇಶ ಕೇಳುತ್ತಿದ್ದಾರೆ. ಸರ್ಕಾರ ಅನುಮತಿ ನೀಡಿದ ನಂತರ ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಮಾಡಿಕೊಳ್ಳಲಾಗುವುದು.

- ಕೆ.ಪಿ. ಗೋಪಾಲಕೃಷ್ಣ, ಅಧ್ಯಕ್ಷರು, ಎನ್‌ಪಿಎಸ್‌