ಬೆಂಗಳೂರು :  ಅಪ್ಪ ಹಗಲು ರಾತ್ರಿ ಆಟೋ ಓಡಿಸಿ ನನ್ನ ಓದಿಗೆ ಶ್ರಮಿಸುತ್ತಿದ್ದರು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಗುರಿ ನನ್ನದಾಗಿತ್ತು. ಇದೇ ಸಿಇಟಿಯಲ್ಲಿ ನನಗೆ ಐದನೇ  ರ‍್ಯಾಂಕ್ ಬರಲು ಕಾರಣವಾಯಿತು...

ಇದು, ಶನಿವಾರ ಪ್ರಕಟವಾದ ರಾಜ್ಯ ಸಿಇಟಿ ಫಲಿತಾಂಶದಲ್ಲಿ ಬಿ.ಎಸ್ಸಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿ ಎನ್‌.ಶ್ರೀಧರ್‌ ಅವರ ಮಾತು.

ಬೆಂಗಳೂರಿನ ಸೌಂದರ್ಯ ಕಾಂಪೋಸಿಟ್‌ ಪಿಯು ಕಾಲೇಜು ವಿದ್ಯಾರ್ಥಿಯಾಗಿರುವ ಎನ್‌.ಶ್ರೀಧರ್‌, ಅಪ್ಪ ಲಗ್ಗೆರೆಯಲ್ಲಿ ಆಟೋ ಓಡಿಸುತ್ತಾರೆ, ಅಮ್ಮ ಗಾರ್ಮೆಂಟ್ಸ್‌ನಲ್ಲಿ ದುಡಿದು ನನ್ನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಡುತ್ತಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ನನಗೆ ಅದು ನನಗೆ ತಟ್ಟದಂತೆ, ನನ್ನ ಓದಿಗೆ ಅದರಿಂದ ಒಂದಿಷ್ಟೂಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ನನಗಾಗಿ ಅವರು ಪಡುತ್ತಿರುವ ಶ್ರಮಕ್ಕೆ ಮುಂದೆ ಇನ್ನೂ ದೊಡ್ಡ ಪ್ರತಿಫಲ ನೀಡುವ ಗುರಿ ನನ್ನದಾಗಿದೆ ಎಂದು ಹೇಳುತ್ತಾರೆ.

ಮನೆಯ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟುಚೆನ್ನಾಗಿಲ್ಲ. ಆದರೆ, ನನ್ನ ಓದಿಗೆ ಅದೆಂದೂ ಅಡ್ಡಿಯಾಗಿಲ್ಲ. ತರಗತಿ ಪಾಠಗಳನ್ನು ಅಂದಂದೇ ಮನನ ಮಾಡಿಕೊಳ್ಳುತ್ತಿದ್ದೆ. ಮನೆಯಲ್ಲಿ ರಾತ್ರಿ 12ರವರೆಗೂ ಓದಿಕೊಳ್ಳುತ್ತಿದ್ದೆ. ಯಾವುದೇ ಕೋಚಿಂಗ್‌ಗೆ ಹೋಗಿಲ್ಲ. ತರಗತಿ ಇಲ್ಲದಾಗ ಗ್ರಂಥಾಲಯದಲ್ಲಿ ಹೆಚ್ಚು ಓದಿನಲ್ಲಿ ಕಾಲ ಕಳೆಯುತ್ತಿದ್ದೆ. ಪಿಯುಸಿಯಲ್ಲಿ ಶೇ.97ರಷ್ಟುಅಂಕ ಬಂದಿತ್ತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಓದಬೇಕು ಎಂಬ ಬಗ್ಗೆ ಉತ್ತಮ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದರು. ನೀಟ್‌ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಅಲ್ಲದೆ, ಜೆಇಇ-ಅಡ್ವಾನ್‌ಗೂ ತಯಾರಿ ಮಾಡುತ್ತಿದ್ದೇನೆ. ಐಐಟಿ ಸೀಟು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.