ಬೆಂಗಳೂರು(ಜೂ.18): ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಗುರುವಾರ (ಜೂ.18) ರಾಜ್ಯಾದ್ಯಂತ ಒಟ್ಟು 1016 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆವ ಜೊತೆಗೆ ಆರೋಗ್ಯ ದೃಷ್ಟಿಯಿಂದ ಕೊರೋನಾ ನಿಯಂತ್ರಣ ಕ್ರಮ ತಪ್ಪದೆ ಪಾಲಿಸಿ.

"

ಆಂಗ್ಲ ಭಾಷಾ ಪರೀಕ್ಷೆಗೆ ಒಟ್ಟು 5,95,997 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ಉಚಿತ ಸಾರಿಗೆ ವ್ಯವಸ್ಥೆ ಮಾಡಿದೆ. ನಿಗದಿತ ಅವಧಿಗೂ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಬರುವಾಗ ಹಾಲ್‌ಟಿಕೆಟ್‌, ತಮ್ಮ ಗುರುತಿನ ಚೀಟಿ ಜೊತೆಗೆ ಮಾಸ್ಕ್‌, ಪ್ರತ್ಯೇಕ ವಾಟರ್‌ ಬಾಟಲ್‌, ಅನಾರೋಗ್ಯವಿದ್ದವರು ಅಗತ್ಯ ಔಷಧಿಗಳನ್ನು ಮರೆಯದೆ ತರಬೇಕು. ಮೊಬೈಲ್‌ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಿವಮೊಗ್ಗ ಸಕಲ ಸಜ್ಜು

ಕೊರೋನಾ ಕಾರಣ ಸುರಕ್ಷತೆ:

ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪರೀಕ್ಷಾ ಕೇಂದ್ರ ಪ್ರವೇಶದ ವೇಳೆ ಥರ್ಮಲ್‌ ಸ್ಕಾ್ಯನರ್‌ನಿಂದ ದೇಹದ ಉಷ್ಣತೆ ಪರಿಶೀಲನೆ, ಮಾಸ್ಕ್‌ ವಿತರಣೆ, ಕೈಗಳಿಗೆ ಸ್ಯಾನಿಟೈಸರ್‌ ನೀಡಿಕೆ ಸೇರಿದಂತೆ ಕೊರೋನಾ ನಿಯಂತ್ರಣ ಕ್ರಮಗಳನ್ನು ಅನುಸರಿಸರಿಸಲಾಗುತ್ತದೆ. ಹಾಗಾಗಿ ಒಂದು ಗಂಟೆ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಅನಾರೋಗ್ಯ ಇರುವ ಮಕ್ಕಳು ಪರೀಕ್ಷೆ ಬರೆಯಲು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿರುವವರು ನಿರ್ಲಕ್ಷಿಸದೆ, ಮುಚ್ಚಿಡದೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದು ಎಲ್ಲರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಸಾಮಾಜಿಕ ಅಂತರ:

ಸಾಮಾಜಿಕ ಅಂತರದ ದೃಷ್ಟಿಯಿಂದ ಪ್ರತಿ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿ ಈ ಹಿಂದಿನ ಪರೀಕ್ಷೆಗಳಿಗಿಂತ 256 ಪರೀಕ್ಷಾ ಕೇಂದ್ರಗಳು ಹಾಗೂ 13,528 ಕೊಠಡಿಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ. ಇದರಿಂದ ಒಟ್ಟು ಪರೀಕ್ಷಾ ಕೇಂದ್ರಗಳು 430 ಆಗಿದೆ. ಅಲ್ಲದೆ, 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿ ಕೊಂಡಿದ್ದಾರೆ. ಇದರಿಂದ ಸಾಕಷ್ಟುಜನರ ಪರೀಕ್ಷಾ ಕೇಂದ್ರಗಳು ಹಾಗೂ ಕೊಠಡಿಗಳು ಬದಲಾವಣೆಯಾಗಿರುತ್ತವೆ. ಹಾಗಾಗಿ ಪರೀಕ್ಷಾ ಕೇಂದ್ರಗಳಿಗೆ ಬೇಗ ಬಂದು ತಮ್ಮ ಸ್ಥಳ ಹುಡುಕಿಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇಂದು ಪಿಯುಸಿ ಇಂಗ್ಲೀಷ್ ಪರೀಕ್ಷೆ: ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್, ಇಲ್ಲಿದೆ ಡೀಟೇಲ್ಸ್

ಕಳೆದ ಮಾಚ್‌ರ್‍ 4ರಿಂದ 23ರವರೆಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳು ನಿಗದಿಯಾಗಿತ್ತು. ಆದರೆ, ಅಷ್ಟರಲ್ಲಿ ಕೊರೋನಾ ಸೋಂಕು ಬಿಗಡಾಯಿಸತೊಡಗಿದ್ದರಿಂದ ಮಾ.23ರಂದು ನಡೆಯಬೇಕಿದ್ದ ಆಂಗ್ಲ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಿರುವ ನಡುವೆಯೇ ಬಾಕಿ ಇದ್ದ ಪರೀಕ್ಷೆ ನಡೆಸುತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ.

ವಿಶೇಷ ಸೂಚನೆ:

ಪರೀಕ್ಷಾ ಕೇಂದ್ರಗಳನ್ನು ಬದಲಿಸಿಕೊಂಡಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಹೊಸ ಕೇಂದ್ರಕ್ಕೆ ಹೋಗಲಾಗದಿದ್ದರೆ ಮೂಲ ಕೇಂದ್ರಕ್ಕೇ ಹಾಜರಾಗಿ ಪರೀಕ್ಷೆ ಬರೆಯಲು ಕೊನೆ ಕ್ಷಣದವರೆಗೂ ಅವಕಾಶ ನೀಡಲಾಗಿದೆ. ಯಾವುದೇ ಕಾರಣಗಳಿಂದ ಈ ಬಾರಿ ಪರೀಕ್ಷೆಗೆ ಗೈರು ಹಾಜರಾದವರನ್ನು ಮುಂದಿನ ಪೂರಕ ಪರೀಕ್ಷೆಯಲ್ಲಿಯೂ ರೆಗ್ಯುಲರ್‌ ವಿದ್ಯಾರ್ಥಿ ಎಂದೇ ಪರಿಗಣಿಸಲಾಗುತ್ತದೆ. ಪರೀಕ್ಷೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಹೊರ ರಾಜ್ಯಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ತಮ್ಮ ಗುರುತಿನ ಚೀಟಿ, ಹಾಲ್‌ಟಿಕೆಟ್‌ ತೋರಿಸಿ ಉಚಿತ ಪ್ರಯಾಣ ಹಾಗೂ ಪಾಸ್‌ ಪಡೆದು ಪ್ರಯಾಣ ಮಾಡಬಹುದು.