Asianet Suvarna News Asianet Suvarna News

ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಿವಮೊಗ್ಗ ಸಕಲ ಸಜ್ಜು

ಪಿಯುಸಿ ಪರೀಕ್ಷೆ ನಡೆಯಲಿರುವ ಎಲ್ಲಾ 33 ಕೇಂದ್ರಗಳನ್ನು ಈಗಾಗಲೇ ಎರಡು ಬಾರಿ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಪರೀಕ್ಷೆಗೆ ಕೊಠಡಿಯನ್ನು ಹಸ್ತಾಂತರಿಸುವ ಪೂರ್ವದಲ್ಲಿ ಇನ್ನೊಮ್ಮೆ ಸ್ಯಾನಿಟೈಸ್‌ ಮಾಡಲು ಸೂಚಿಸಲಾಗಿದೆ. ಸುರಕ್ಷಿತ ಪರೀಕ್ಷೆ ನಡೆಸಲು ಶಿವಮೊಗ್ಗ ಜಿಲ್ಲಾಡಳಿತ ಸಕಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Shivamogga Administration All set to organise PUC and SSLC Examination
Author
Shivamogga, First Published Jun 18, 2020, 8:25 AM IST

ಶಿವಮೊಗ್ಗ(ಜೂ.18): ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರೀಕ್ಷೆ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಿಯುಸಿ ಪರೀಕ್ಷೆ ನಡೆಯಲಿರುವ ಎಲ್ಲಾ 33 ಕೇಂದ್ರಗಳನ್ನು ಈಗಾಗಲೇ ಎರಡು ಬಾರಿ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಪರೀಕ್ಷೆಗೆ ಕೊಠಡಿಯನ್ನು ಹಸ್ತಾಂತರಿಸುವ ಪೂರ್ವದಲ್ಲಿ ಇನ್ನೊಮ್ಮೆ ಸ್ಯಾನಿಟೈಸ್‌ ಮಾಡಲು ಸೂಚಿಸಲಾಗಿದೆ. ಪ್ರತಿ ವಿದ್ಯಾರ್ಥಿ ಮಾಸ್ಕ್‌ ಧರಿಸಿಕೊಂಡು ಬರಲು ಸೂಚಿಸಲಾಗಿದೆ. ಆದರೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಮಾಸ್ಕ್‌ ಒದಗಿಸಬೇಕು. ಇದೇ ರೀತಿ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ನೀರು ಹಾಗೂ ಬಿಸ್ಕಿಟ್‌ ಪ್ಯಾಕೇಟ್‌ ನೀಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

SSLC ಎಕ್ಸಾಮ್‌: ಪರೀಕ್ಷಾ ಕೇಂದ್ರ ಕೇಳಿದ್ದೊಂದು, ಕೊಟ್ಟಿದ್ದು ಮತ್ತೊಂದು..!

ಪಿಯು ವಿದ್ಯಾರ್ಥಿಗಳಿಗಾಗಿ ಒಟ್ಟು 129 ರೂಟ್‌ಗಳಿಗೆ 133 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್‌ನಲ್ಲಿ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಏನಾದರೂ ಅನಾನುಕೂಲತೆ ಉಂಟಾದರೆ ನೋಡಲ್‌ ಅಧಿಕಾರಿಯೇ ಜವಾಬ್ದಾರಿಯಾಗುತ್ತಾರೆಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ:

ಇದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಲೋಪ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಒಟ್ಟು 84 ಕೇಂದ್ರಗಳಿದ್ದು, ಗ್ರಾಮೀಣ ಭಾಗದಲ್ಲಿ 40 ಹಾಗೂ ನಗರ ಪ್ರದೇಶದಲ್ಲಿ 44 ಕೇಂದ್ರಗಳಿವೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆ ತರಲು 239 ಬಸ್‌ ವ್ಯವಸ್ಥೆ ಮಾಡಲಾಗಿದೆ. 189 ರೂಟ್‌ಗಳಲ್ಲಿ ಒಟ್ಟು 336 ಪಾಯಿಂಟ್‌ ಗುರುತಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆ ತರಲು ರೂಟ್‌ ಬಸ್‌ಗಳನ್ನು ಹೊರತುಪಡಿಸಿ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಬೇಕು.

ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ಪಡೆಯಲು ಬರುವ ಸಂದರ್ಭದಲ್ಲಿ 3 ಮಾಸ್ಕ್‌ ಒದಗಿಸಲು ಸೂಚಿಸಲಾಗಿದೆ. ಸುಗಮವಾಗಿ ಪರೀಕ್ಷೆ ನಡೆಸಲು ಸರ್ಕಾರದ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಾಲಕರು ಸಹ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಸಚಿವರು ತಿಳಿಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಜಿಪಂ ಸಿಇಒ ಎಂ.ಎಲ್‌.ವೈಶಾಲಿ, ಡಿಡಿಪಿಯು ನಾಗರಾಜ ಕಾಗಲಕರ್‌, ಡಿಡಿಪಿಐ ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios