ಬೆಂಗಳೂರು, [ಮಾ.12]: ಕರ್ನಾಟಕ ಪದವಿ ಪೂರ್ವ ಇಲಾಖೆ ಹಾಗೂ ಪಿಯು ಉಪನ್ಯಾಸಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಪಿಯುಸಿ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ  ಗೈರಾಗಲು ಉಪನ್ಯಾಸಕರ ಸಂಘ ತೀರ್ಮಾನಿಸಿದೆ. 

ಇಂದು [ಮಂಗಳವಾರ] ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಉಪನ್ಯಾಸಕರ ಸಭೆಯಲ್ಲಿ ಈ ತಿರ್ಮಾನ ಕೈಗೊಂಡಿದ್ದಾರೆ.

ಕೆಸಿಎಸ್ಆರ್ ಪ್ರಕಾರ 60ದಿನಗಳ ರಜೆ ಕಡ್ಡಾಯವಾಗಿ‌ ನೀಡಬೇಕು.ರಜೆ ದಿನಗಳಲ್ಲಿ ನಮಗೆ ರಜೆ‌ ಸಿಗದೆ ಇರುವುದು ಮಾನಸಿಕ ಹಿಂಸೆ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ 3 ಬಾರಿ ಮನವಿ ಪತ್ರ ನೀಡಲಾಗಿದೆ ಆದ್ರೆ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾರ್ಚ್ 20ರೊಳಗೆ ಬೇಡಿಕೆ ಈಡೇರಿಸದೇ ಇದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾರ್ಚ್ 21ಕ್ಕೆ ಅಹೋರಾತ್ರಿ ಧರಣಿ ಕೂರುವುದಾಗಿ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಎಚ್ಚರಿಕೆ ನೀಡಿದ್ದಾರೆ.

2016ರಿಂದ ಇಲ್ಲಿಯವರೆಗೆ ಯಾವುದೇ ಪ್ರತಿಭಟನೆ ಮಾಡಿಲ್ಲ. ಮೌಲ್ಯಮಾಪನವನ್ನು ಸಹ ಬಹಿಷ್ಕಾರ ‌ಮಾಡಿಲ್ಲ. 2016ರಿಂದ ಇಲ್ಲಿಯವರೆಗೆ ಕಾದಿದ್ದೇವೆ ಸರ್ಕಾರ ಸರಿಯಾಗಿ ಸ್ಪಂದಿಸದ ಹಿನ್ನಲೆ ಈ ಹೋರಾಟ ಅನಿವಾರ್ಯವಾಗಿದೆ ಎಂದರು.

ಮಾರ್ಚ್ 1 ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ಮಾ.18ಕ್ಕೆ ಮುಕ್ತಾಯವಾಗಲಿವೆ. ಇನ್ನು ಪರೀಕ್ಷೆಗಳು ಪೂರ್ಣ ಮುಗಿದಿಲ್ಲ. ಆಗಲೇ ಪದವಿ ಶಿಕ್ಷಣ ಇಲಾಖೆ ಹಾಗೂ ಉಪನ್ಯಾಸಕ ನಡುವೆ ಜಟಾಪಟಿ ನಡೆದಿದೆ.

ಇವರಿಬ್ಬರ ಕಿತ್ತಾಟದ ಮಧ್ಯೆ ಬಡವಾಗುವುದು ಫಲಿತಾಂಶಕ್ಕಾಗಿ ಕಾದು ಕುಳಿತುಕೊಂಡಿರುವ ವಿದ್ಯಾರ್ಥಿಗಳು. ಯಾಕಂದ್ರೆ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಬೇಗ ಪ್ರಕಟಿಸದೇ ಇದ್ದಲ್ಲಿ ಮುಂದಿನ ವ್ಯಾಸಂಕ್ಕೆ ತೊಂದರೆಯಾಗುವುದಂತೂ ಗ್ಯಾರಂಟಿ.