ಕಟ್ಟಡ ನಿರ್ಮಾಣಕ್ಕೆ ಮರಳು ಅತ್ಯಾವಶ್ಯಕವಾಗಿರುವುದರಿಂದ ಮರಳು ನಿಯಮ ರೂಪಿಸಿ ನಿಯಮಾವಳಿಯಂತೆ ಜರೂರು ಅಗತ್ಯವಿರುವ ಮರಳು ಸರಬರಾಜಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಕಟ್ಟಡ ಕಾರ್ಮಿಕ ಸಂಘಟನೆಗಳ ಸದಸ್ಯರು ಹೊಳಲ್ಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಿದರು.

ಹೊಳಲ್ಕೆರೆ (ನ.15): ಕಟ್ಟಡ ನಿರ್ಮಾಣಕ್ಕೆ ಮರಳು ಅತ್ಯಾವಶ್ಯಕವಾಗಿರುವುದರಿಂದ ಮರಳು ನಿಯಮ ರೂಪಿಸಿ ನಿಯಮಾವಳಿಯಂತೆ ಜರೂರು ಅಗತ್ಯವಿರುವ ಮರಳು ಸರಬರಾಜಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಕಟ್ಟಡ ಕಾರ್ಮಿಕ ಸಂಘಟನೆಗಳ ಸದಸ್ಯರು ಹೊಳಲ್ಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ಎಂ.ಎಂ ಸರ್ಕಾರಿ ಪ್ರೌಢಶಾಲಾ ಮುಂಭಾಗದಿಂದ ಹೊರಟ ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿ ಮುಖ್ಯವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ತಾಲೂಕಿನದ್ಯಾಂತ ಮರಳು ಗಣಿಗಾರಿಕೆ ನಿಷೇಧ ಮಾಡಲಾಗಿದ್ದು, ಇದರಿಂದ ಕಟ್ಟಡ ನಿರ್ಮಾಣಕ್ಕೆ ಮರಳು ಇಲ್ಲದೆ ಕಟ್ಟಡ ಕಾಮಗಾರಿಗಳು ನಿಂತು ಹೋಗಿವೆ. ಸುಮಾರು ಎರಡು ತಿಂಗಳಿಂದ ಕಟ್ಟಡ ಕಾರ್ಮಿಕರು, ಮನೆ ಮಾಲೀಕರು ಮತ್ತು ಗುತ್ತಿಗೆದಾರರು ಗಾರೆ ಕೆಲಸ, ಮರಗೆಲಸ, ಮೇಸ್ತ್ರಿಗಳು, ಬಾರ್ ಬೈಂಡಿಂಗ್, ಎಲೆಕ್ಟ್ರೀಷಿಯನ್ ಬಣ್ಣ ಹೊಡೆಯವರು ಸೇರಿದಂತೆ ಸುಮಾರು 15 ರಿಂದ 20 ಸಾವಿರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಿಂದ ಬರುವ ಕಾರ್ಮಿಕರು ಮರಳು ಇಲ್ಲದೆ ಕಾಮಗಾರಿ ನಿಂತಿರುವುದರಿಂದ ಹೊಟ್ಟೆಪಾಡಿಗಾಗಿ ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ತಾಲೂಕು ಅಡಳಿತ ಇದನ್ನು ಮನಗಂಡು ಈ ಹಿಂದೆ ಇದ್ದ 2014-15 ರಲ್ಲಿ ಅನ್ವಯದಂತೆ ಸರಳ ಮರಳು ಸಾಗಣಿಕೆಗೆ ರಾಯಲ್ಪಿ, ಆಳತೆ ಮತ್ತು ಮಾಪನ ಮುಖಾಂತರವಾಗಲಿ ತಂತ್ರಜ್ಞ ಅಧಿಕಾರಿಗಳಿಂದ ಅವಶ್ಯಕ ಮರಳನ್ನು ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಸಿ ಕಾರ್ಮಿಕರ ನೆರವಿಗೆ ಬರಬೇಕೆಂದು ಒತ್ತಾಯಿಸಿದ ಅವರು, ತಕ್ಷಣ ಮರಳು ಪೂರೈಕೆಗೆ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರು ಬೀದಿಗಿಳಿದು ಹೋರಾಟದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.