ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ದೃಷ್ಟಿಯಿಂದ ತಯಾರಿಸಲಾಗಿರುವ ತಾಮ್ರಸ್'ನನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಸೋಮವಾರ ಬಿಡುಗಡೆ ಮಾಡಿದರು.

ಮೈಸೂರು (ಮೇ.09): ಜನರಿಗೆಶುದ್ಧ ಕುಡಿಯುವ ನೀರನ್ನು ಒದಗಿಸುವ ದೃಷ್ಟಿಯಿಂದ ತಯಾರಿಸಲಾಗಿರುವ ತಾಮ್ರಸ್'ನನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಸೋಮವಾರ ಬಿಡುಗಡೆ ಮಾಡಿದರು.
ಟ್ರಾನ್ಸ್‌ ಡಿಸಿಪ್ಲಿನರಿ ಯೂನಿವರ್ಸಿಟಿ ವಿಜ್ಞಾನಿಗಳು ಹಲವು ವರ್ಷಗಳ ಸಂಶೋಧನೆಯ ಬಳಿಕ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಯಂಸೇವಾ ಸಂಸ್ಥೆಗಳ ಮೂಲಕ ವಿತರಿಸುವ ಗುರಿ ಹೊಂದಲಾಗಿದೆ. ಈ ಕುರಿತಂತೆ ಮಾತನಾಡಿದ ಡಾ. ಶಾಲಿನಿ ರಜನೀಶ್‌, ಶೇ. 50ರಷ್ಟುಕಾಯಿಲೆಗಳು ಕಲುಷಿತ ಕುಡಿಯುವ ನೀರಿನಿಂದಲೇ ಬರುತ್ತಿದ್ದು, ಹೆಚ್ಚಾಗಿ ಮಕ್ಕಳು, ಗರ್ಭಿಣಿಯರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈಗಿರುವಾಗ ಎಲ್ಲಾ ವರ್ಗದ ಕೈಗೆಟಕುವ ಬೆಲೆಯಲ್ಲಿ ‘ತಾಮ್ರಸ್‌'ಎಂಬ ಸಾಧನವನ್ನು ಪರಿಚಯಿಸಿರುವುದು ಶ್ಲಾಘನೀಯ. ‘ತಾಮ್ರಸ್‌' ಬಳಕೆ ಬಹಳ ಸುಲಭವಾಗಿದೆ. ಇದಕ್ಕೆ ವಿದ್ಯುಚ್ಛಕ್ತಿ, ನಿರ್ವಹಣಾ ವೆಚ್ಚವೂ ಅಗತ್ಯವಿಲ್ಲ. ಅಜ್ಜಿಯ ಕಾಲದ ತಾಮ್ರದ ಪಾತ್ರೆಯಂತೆ ಮುಂದಿನ ಪೀಳಿಗೆಯವರೂ ದೀರ್ಘಾವಧಿಗೆ ಬಳಸಬಹುದು ಎಂದು ಹೇಳಿದರು.

ಯೋಜನೆಯ ಪ್ರಧಾನ ಸಂಚಾಲಕಿ ಡಾ. ಪದ್ಮಾ ವೆಂಕಟ್‌ ಮಾತನಾಡಿ, ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿಟ್ಟರೆ ನಿರ್ದಿಷ್ಟಅವಧಿ ಯೊಳಗೆ ವೈಬ್ರಿಯೋ ಕಾಲರೆ, ರೊಟಾ ವೈರಸ್‌ ಮತ್ತು ಶಿಗೆಲ್ಲ ಫೆಕ್ಸ್‌ನೆರಿಯಂಥ ಮಾರಣಾಂತಿಕ ರೋಗಾಣುಗಳು ನಾಶವಾ ಗುತ್ತವೆ ಎಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ಹಾಗಾಗಿ ಅದೇ ಮಾದರಿ ಯಲ್ಲಿ ಕಡಿಮೆ ವೆಚ್ಚದ ಸಮಕಾಲೀನ ವಿನ್ಯಾಸದ ಸಾಧನವೊಂದನ್ನು ರೂಪಿಸಿದೆವು ಎಂದು ತಿಳಿಸಿದರು. ಟಿಡಿಯು ಕುಲಸಚಿವ ಡಾ. ಬಾಲಕೃಷ್ಣ ಪಿಸುಪತಿ ಮಾತನಾಡಿ, ಆರು ವರ್ಷಗಳ ನಿರಂತರ ಸಂಶೋಧನೆಯ ಪ್ರತಿಫಲವಾಗಿ ‘ತಾಮ್ರಸ್‌' ರೂಪಿಸಲಾಗಿದೆ. ನ್ಯಾಷನಲ… ಇನ್‌ಸ್ಟಿಟ್ಯೂಟ್‌ ಆಫ್‌ ಕಾಲರಾ ಆ್ಯಂಡ್‌ ಎಂಟೆರಿಕ್‌ ಡಿಸೀಸಸ್‌ ಮತ್ತು ವೆಲ್ಲೂರಿನ ಸಿಎಂಸಿಯ ವಿಜ್ಞಾನಿಗಳು ರೋಗಾಣುಗಳನ್ನು ನಾಶಪಡಿಸುವ ಈ ಸಾಧನದ ಸಾಮರ್ಥ್ಯ ಪರೀಕ್ಷಿಸಿ ದೃಢಪಡಿಸಿದ್ದಾರೆ. ಭಾರತ ಮತ್ತು ಕೀನ್ಯಾದ ಕುಟುಂಬಗಳಲ್ಲಿ ಈ ಸಾಧನದ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ. ಇದಕ್ಕಾಗಿ ಕೆನಡಾದ ಗ್ರ್ಯಾಂಡ್‌ ಚಾಲೆಂಜಸ್‌ ಬೋಲ್ಡ… ಐಡಿಯಾಸ್‌ ವಿತ್‌ ಬಿಗ್‌ ಇಂಪ್ಯಾಕ್ಟ್ ಅನುದಾನ ನೀಡಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜೇನುಗೂಡು- ಮೈರಾಡ (ಮಲೆಮಹದೇಶ್ವರ ಬೆಟ್ಟ), ಸಮೂಹ (ರಾಯಚೂರು) ಮತ್ತು ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ (ಎಚ್‌.ಡಿ.ಕೋಟೆ) ಸದಸ್ಯರು, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

(ಸಾಂದರ್ಭಿಕ ಚಿತ್ರ)