ಶಿವಮೊಗ್ಗ (ನ.06): ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ನಿರ್ಣಯ ಸರ್ಕಾರ ಹಿಂಪಡೆಯಲು ಆಗ್ರಹಿಸಿ ಶನಿವಾರ ಹಿಂದೂ ಜನಜಾಗೃತಿ ಸಮಿತಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನ. 10 ರಂದು ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ವೇಳೆ ಕನ್ನಡ ನಾಡಿಗೆ ದ್ರೋಹ ಮಾಡಿದ, ಕನ್ನಡಿಗರನ್ನು ಹಿಂಸಿಸಿದ, ಕನ್ನಡಿಗರ ಶ್ರದ್ಧಾಸ್ಥಾನವನ್ನು ಭಗ್ನಗೊಳಿಸಿದ ಟಿಪ್ಪು ಜಯಂತಿ ಆಚರಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಕನ್ನಡ ವಿರೋಧಿ ಟಿಪ್ಪುವಿನ ಜಯಂತಿ ಆಚರಿಸಿದರೆ ಸಮಾಜ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಭಯೋತ್ಪಾದಕ ಶಕ್ತಿಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಶಿವಾಜಿ ಜಯಂತಿ, ಮದಕರಿ ನಾಯಕ ಜಯಂತಿಯನ್ನು ಸರ್ಕಾರ ಆಚರಿಸುವ ಮೂಲಕ ಕನ್ನಡ ನಾಡಿನ ಗೌರವ, ಆದರ್ಶವನ್ನು ಕಾಪಾಡಬೇಕು. ಇದನ್ನು ಬಿಟ್ಟು ಮತಾಂತರ ಮಾಡಿದ ಅಸಹಿಷ್ಣು ಟಿಪ್ಪು ಜಯಂತಿ ಆಚರಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಸಮಿತಿ ಮುಖಂಡ ಪ್ರಸನ್ನಕಾಮತ್, ವಿಶ್ವನಾಥ, ಶಬರೀಶ, ಯೋಗೀಶ, ವೇಲುಸ್ವಾಮಿ, ಪ್ರದೀಪ್ ಮೊದಲಾದವರು ಇದ್ದರು.