Asianet Suvarna News Asianet Suvarna News

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೇವಲ 24 ಗಂಟೆಯಲ್ಲಿ ಸಾಲ ಮನ್ನಾ: ತಿಪಟೂರಿನಲ್ಲಿ ಎಚ್'ಡಿಕೆ ಭರವಸೆ

ರಾಜ್ಯ ಸರ್ಕಾರ ಜನರಿಗೆ ವಿವಿಧ ಭಾಗ್ಯಗಳನ್ನು ಕೊಟ್ಟಿದ್ದೇವೆಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಅದೇ ಪಕ್ಷದ ಸಚಿವ ಟಿ.ಬಿ. ಜಯಚಂದ್ರರವರೇ ಅನ್ನಭಾಗ್ಯ ಯೋಜನೆಯಿಂದ ಮಧುಮೇಹ, ಅನಿಮಿಯಾ ಕಾಯಿಲೆಗಳು ಬರುತ್ತಿವೆ ಎಂದು ಹೇಳಿರುವುದನ್ನು ಗಮನಿಸಿದರೆ ಇವರದ್ದು ಅನ್ನ ಭಾಗ್ಯವಲ್ಲ, ಕಾಯಿಲೆ ಭಾಗ್ಯ ಎಂಬುದು ಖಾತ್ರಿಯಾದಂತೆ ಎಂದರು.

tumkur news hdk promises loan waiver within 24 hrs if jds comes to power
  • Facebook
  • Twitter
  • Whatsapp

ತಿಪಟೂರು: ನಿರಂತರ ಬರಗಾಲದ ಹೊಡೆತದಿಂದ ರಾಜ್ಯದ ರೈತ ಸಮುದಾಯ ಸಾಲದ ಕೂಪಕ್ಕೆ ಸಿಲುಕಿ ಸರಣಿ ಆತ್ಮಹತ್ಯೆಗಳು ನಡೆ ಯುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಾಲ ಮನ್ನಾ ಮಾಡದೆ, ಒಬ್ಬರ ಮೇಲೆ ಮತ್ತೊಬ್ಬರು ಹೇಳಿಕೊಂಡು ಅನ್ನದಾತರ ಬದುಕು ಬೀದಿಗೆ ಬೀಳುವಂತೆ ನಡೆದುಕೊಳ್ಳುತ್ತಿವೆ. ಇದರ ಹಿಂದೆ ರೈತರ ಬಗ್ಗೆ ಈ ಎರಡೂ ಸರ್ಕಾರಗಳಲ್ಲಿರುವ ಕ್ರೂರತನ ಎಂತಹದು ಎಂಬುದನ್ನು ನಮ್ಮ ರೈತ ಸಮುದಾಯ ಇನ್ನಾದರೂ ಅರ್ಥಮಾಡಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ನಗರದ ವಿನೋದ ಟಾಕೀಸ್‌ ಮೈದಾನದಲ್ಲಿ ಶನಿವಾರ ನಡೆದ ತಾಲೂಕು ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ರೈತರು ತೀವ್ರ ಬರಗಾಲ ಎದುರಿಸುತ್ತಿದ್ದು, ಮುಂದಿನ ಅವಧಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ ಲಾಗುವುದು. ಕೇವಲ 20 ತಿಂಗಳ ನನ್ನ ಅಧಿಕಾರಾವಧಿಯಲ್ಲಿ ಎರಡೂವರೆ ಸಾವಿರ ಕೋಟಿ ರು. ಸಾಲಮನ್ನಾ ಸೇರಿದಂತೆ ಅನೇಕ ವಿಕಲಚೇತನ, ಬಡ, ಮಧ್ಯಮ ಮತ್ತು ಮಹಿಳಾಪರ ಯೋಜನೆಗಳನ್ನು ನೀಡಿದ್ದೇನೆ. ಅಂಗವಿಕಲರಿಗೆ ಮತ್ತು ವಿಧವೆಯರಿಗೆ ತಿಂಗಳಿಗೆ 2 ಸಾವಿರ ರು. ವೃದ್ಧಾಪ್ಯ ವೇತನ 5 ಸಾವಿರ, ಗರ್ಭಿಣಿಯರಿಗೆ 6 ಸಾವಿರ ಅಲ್ಲದೆ ಯುವಕರಿಗೆ ಹಳ್ಳಿಗಳಲ್ಲಿ ನಿರುದ್ಯೋಗ ನಿವರಣಾ ಯೋಜನೆಯಡಿಯಲ್ಲಿ ನರ್ಸರಿಯಲ್ಲಿ ವಿವಿಧ ಗಿಡಬೆಳೆದು ಅವಶ್ಯ ಸ್ಥಳಗಳಲ್ಲಿ ನೆಟ್ಟು ಪೋಷಿಸಲು 20 ವರ್ಷದ ತನಕ ತಿಂಗಳಿಗೆ 6 ಸಾವಿರ ಪ್ರೋತ್ಸಾಹಧನ ನೀಡುವ ಬಗ್ಗೆ ಚಿಂತಿಸಿದ್ದು, ನೀವು ಅಧಿಕಾರ ನೀಡಿದ ತಕ್ಷಣವೇ ಇವುಗಳನ್ನೆಲ್ಲಾ ಈಡೇರಿಸಲಾಗುವುದು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ಕೆರೆಕಟ್ಟೆಗಳಿಗೆ ಶಾಶ್ವತ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಪ್ರತಿ ತಾಲೂಕು ಕೇಂದ್ರಗಳಲ್ಲಿ ಗಾರ್ಮೆಂಟ್ಸ್‌ ರೀತಿಯ ಹತ್ತು ಹಲವು ಕೈಗಾರಿಕೆಗಳನ್ನು ಹುಟ್ಟು ಹಾಕುವ ಮೂಲಕ ರಾಜ್ಯದ ಜನತೆಯ ಬದುಕನ್ನು ಹಸನು ಮಾಡಲು ಬದ್ಧನಾಗಿದ್ದೇನೆ ಎಂದರು.

ವೈಬ್ರೇಟಿಂಗ್‌ ಭಾಷಣ: ಪ್ರಧಾನಿ ಮೋದಿಯವರು 3 ವರ್ಷದ ಸಾಮಾನ್ಯ ಆಡಳಿತವನ್ನೇ ಮಹಾನ್‌ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಸಿನಿಮಾ ಸ್ಟೈಲ್‌'ನಲ್ಲಿ ಮಾಡುವ ಹಿಂದಿಯ ವೈಬ್ರೇಟಿಂಗ್‌ ಭಾಷಣವನ್ನು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮೋದಿಯವರ ಮಹಾನ್‌ ಸಾಧನೆ ಎಂದು ಬಿಂಬಿಸುತ್ತಿರುವುದು ಈ ದೇಶದ ದುರಂತ. ಮೋದಿಯವರ ನೋಟ್‌'ಬ್ಯಾನ್‌'ನಿಂದ ಯಾವುದೇ ಸಾಧನೆಯಾಗಿಲ್ಲ. ರೈತರ, ಕೂಲಿಕಾರರ ಹಾಗೂ ಬಡ ಮಧ್ಯಮ ವರ್ಗದವರಿಗೆ ಇದರಿಂದ ಸಾಕಷ್ಟುಹೊಡೆತ ಬಿದ್ದಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗಂತೂ ಮೇಲೇಳದಂಥ ತೊಂದರೆಯಾಗಿದೆ. ಕೇವಲ ಶ್ರೀಮಂತರು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಅನುಕೂಲ ವಾಗುವಂತಹ ಯೋಜನೆಗಳೇ ಅವರ ಸಾಧನೆ ಎಂಬುದನ್ನು ನೀವು ಮರೆಯಬಾರದು. ಉದ್ಯಮಿಗಳ ಲಕ್ಷಾಂತರ ಕೋಟಿ ರು. ಸಾಲ ಮನ್ನಾ ಮಾಡುವ ಅವರ ಸರ್ಕಾರ, ರೈತರ ಸಾಲಮನ್ನಾ ಮಾಡಿದರೆ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲ ವಾಗುತ್ತದೆ ಎಂದು ಹೇಳುತ್ತಿರುವುದನ್ನು ನೀವು ಅರ್ಥ ಮಾಡಿಕೊಂಡರೆ ಮೋದಿಗೆ ಮತ ಹಾಕುವುದಿಲ್ಲ ಎಂದರು.

ಸಾಲ ಮಾಡಿದ್ದೇ ಸಾಧನೆ: ರಾಜ್ಯದ ಕಾಂಗ್ರೆಸ್‌ ಸರ್ಕಾರವೂ ಲಕ್ಷಾಂತರ ಕೋಟಿ ರು. ಸಾಲ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದರೂ ಯಾವುದೇ ಅಭಿವೃದ್ಧಿ ಇಲ್ಲ. ಲಕ್ಷಾಂತರ ರುಪಾಯಿ ಬಜೆಟ್‌ ಬಗ್ಗೆ ಭಾಷಣ ಬಿಗಿಯುವ ಇವರಿಗೆ ಸಂಕಷ್ಟದಲ್ಲಿರುವ ಅನ್ನದಾತರ ಸಾಲ ಮನ್ನಾ ಮಾಡುವ ಕಳಕಳಿ ಇಲ್ಲ. ಎಂದ ಮೇಲೆ ಭವಿಷ್ಯದಲ್ಲಿ ಇವರಿಂದ ರೈತರಿಗಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಸಹಾಯವಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಇವರ ಅಧಿಕಾರದಲ್ಲಿ ರಾಜ್ಯದ ಅನ್ನದಾತರಿಗಾಗಲಿ, ಪ್ರಾಮಾಣಿಕ ಅಧಿಕಾರಿಗಳಿಗಾಗಲಿ ಯಾವುದೇ ರಕ್ಷಣೆ ಇಲ್ಲ. ಹತ್ತಾರು ಯೋಜನೆಗಳನ್ನು ಸೃಷ್ಟಿಸಿ ಅವುಗಳಿಂದ ಹಣ ಮಾಡುವ ಲಾಬಿಗೆ ಇಳಿದಿರುವ ರಾಜ್ಯ ಸರ್ಕಾರ ತನ್ನ ಅವಧಿಯಲ್ಲಿ ಭ್ರಷ್ಟಾಚಾರವನ್ನೇ ಸಾಧನೆ ಎಂದುಕೊಂಡಿದೆ. ರಾಜ್ಯ ಸರ್ಕಾರ ಜನರಿಗೆ ವಿವಿಧ ಭಾಗ್ಯಗಳನ್ನು ಕೊಟ್ಟಿದ್ದೇವೆಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಅದೇ ಪಕ್ಷದ ಸಚಿವ ಟಿ.ಬಿ. ಜಯಚಂದ್ರರವರೇ ಅನ್ನಭಾಗ್ಯ ಯೋಜನೆಯಿಂದ ಮಧುಮೇಹ, ಅನಿಮಿಯಾ ಕಾಯಿಲೆಗಳು ಬರುತ್ತಿವೆ ಎಂದು ಹೇಳಿರುವುದನ್ನು ಗಮನಿಸಿದರೆ ಇವರದ್ದು ಅನ್ನ ಭಾಗ್ಯವಲ್ಲ, ಕಾಯಿಲೆ ಭಾಗ್ಯ ಎಂಬುದು ಖಾತ್ರಿಯಾದಂತೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ನಮ್ಮ ಪಕ್ಷದ ರೈತ ಯೋಜನೆಗಳನ್ನು ಹೈಜಾಕ್‌ ಮಾಡುತ್ತಿದ್ದು, ನಾವು ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಕಳೆದೆರಡು ವರ್ಷಗಳಿಂದ ಹೇಳುತ್ತಿರುವುದನ್ನೇ ಅವರು ಈಗ ತಮ್ಮ ಸಮಾವೇಶಗಳಲ್ಲಿ ಹೇಳಿಕೊಳ್ಳುತ್ತಿರುವುದು ಅವರಿಗೆ ನಾಚಿಕೆ ತರಿಸಬೇಕಿದೆ. ಭ್ರಷ್ಟಾಚಾರಕ್ಕೆ ಹೆದರದ ಇವರನ್ನು ಅಧಿಕಾರದಿಂದ ದೂರ ವಿಡಲು ನೀವೇ ತೀರ್ಮಾನ ಕೈಗೊಳ್ಳ ಬೇಕೆಂದು ಮನವಿ ಮಾಡಿದರು.

ಜೆಡಿಎಸ್‌ ಪಕ್ಷ ಏಕಾಂಗಿ ಹೋರಾಟ: 9 ವರ್ಷಗಳಿಂದ ನನಗೆ ನೀವು ಅಧಿಕಾರ ನೀಡದೆ ಈಗ ಕೊಟ್ಟಿರುವ ಶಿಕ್ಷೆಯನ್ನು ಇಲ್ಲಿಗೇ ನಿಲ್ಲಿಸಿ. ಮುಂದಿನ ಚುನಾವಣೆ ಯಲ್ಲೂ ನೀವು ನನಗೆ ಅಧಿಕಾರ ನೀಡದಿದ್ದರೆ, ನನಗಿಂತ ನಿಮಗೇ ಹೆಚ್ಚು ಶಿಕ್ಷೆ ಕೊಟ್ಟುಕೊಳ್ಳವಂತಾಗಲಿದೆ. ನಾನು ಅಧಿಕಾರಕ್ಕೆ ಬಂದರೆ ಮಾತ್ರ ನಿಮ್ಮ ಸಾಲ ಮನ್ನಾ ಮಾಡಲು ಸಾಧ್ಯ. ನಮ್ಮ ಪಕ್ಷ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದು, ಮುಂದಿನ ಅವಧಿಯಲ್ಲಾದರೂ ನಮ್ಮ ಪಕ್ಷಕ್ಕೆ ಅಧಿಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಸಮಾವೇಶ ತೃಪ್ತಿ ತಂದಿದೆ: ಇಂದಿನ ಸಮಾವೇಶ ನನಗೆ ಸಂಪೂರ್ಣ ತೃಪ್ತಿ, ಸಮಾಧಾನ ತಂದಿದೆ. ಇದನ್ನು ಆಯೋಜಿಸಿರುವ ಲೋಕೇಶ್ವರ ಅಭಿನಂದನೆಗೆ ಅರ್ಹ ರು. ಅವರು ಇನ್ನೂ ಹೆಚ್ಚಿನ ಸಂಘಟನೆ ಮಾಡಲಿ. ಜೂ.15ರಂದು ಪಕ್ಷದ ವರಿ ಷ್ಠರು ಪಟ್ಟಿಬಿಡುಗಡೆ ಮಾಡುತ್ತಿದ್ದು, ನೀವು ಯಾರನ್ನು ಬಯಸಿ ಈ ಸಮಾವೇಶಕ್ಕೆ ಬಂದಿದ್ದೀರೋ ಅವರಾರಿಗೂ ನಿರಾಶೆ ಮಾಡುವುದಿಲ್ಲ. ಪಟ್ಟಿಯಲ್ಲಿ ಅವರ ಹೆಸರಿರುತ್ತದೆ ಎಂದರು.

ತಾಲೂಕು ಜೆಡಿಎಸ್‌ ಮುಖಂಡ ಲೋಕೇಶ್ವರ ಮಾತನಾಡಿ, ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರು ಈ ಇಳಿ ವಯಸ್ಸಿನಲ್ಲಿ ದೇಶ, ರಾಜ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕುಮಾರ ಸ್ವಾಮಿಯವರ ರೈತಪರ, ಜನಪರ ಹೋರಾಟಕ್ಕೆ ಸಿಗುತ್ತಿರುವ ಜನಸ್ಪಂದನೆ ಅವರೇ ಮುಂದಿನ ಮುಖ್ಯಮಂತ್ರಿ ಎಂಬುದನ್ನು ಎತ್ತಿ ತೋರಿಸುತ್ತಿದೆ. ಅಧಿಕಾರ ಸಿಕ್ಕಿದ ತಕ್ಷಣದಿಂದಲೇ ಅವುಗಳ ನಿವಾರಣೆಗೆ ಭರವಸೆ ನೀಡಿದ್ದು ಅವರನ್ನು ಮುಖ್ಯಮಂತ್ರಿಯಾಗಿಸಲು ತಾಲೂಕಿನ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಮಾರಂಭಕ್ಕೂ ಮುನ್ನ ನಗರದ ಕಾಶಿ ವಿಶ್ವೇಶ್ವರ ದೇವಸ್ಥಾನ ಹಾಗೂ ಮಸೀದಿಗೆ ಕುಮಾರಸ್ವಾಮಿಯವರು ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios