ತಾಲೂಕಿನ ಸೊರಟೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಜೋಳದ ಸೊಪ್ಪೆ ಹೇರಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸೊಪ್ಪೆಗೆ ತಾಗಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಸೊಪ್ಪೆ ಹಾಗೂ ಟ್ರ್ಯಾಕ್ಟರ್ ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ.
ಹೊನ್ನಾಳಿ (ನ.19): ತಾಲೂಕಿನ ಸೊರಟೂರು ಗ್ರಾಮದಲ್ಲಿ ಟ್ರ್ಯಾಕ್ಟರ್ನಲ್ಲಿ ಜೋಳದ ಸೊಪ್ಪೆ ಹೇರಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸೊಪ್ಪೆಗೆ ತಾಗಿ ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿದ್ದ ಸೊಪ್ಪೆ ಹಾಗೂ ಟ್ರ್ಯಾಕ್ಟರ್ ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ.
ಬೆಂಕಿ ತಗುಲಿದ್ದಂತೆ ಟ್ರ್ಯಾಕ್ಟರ್ ಚಾಲಕ ನಾಗರಾಜ್ ಕೂಡಲೇ ವಾಹನ ಬಿಟ್ಟು ಇಳಿದ ಕಾರಣ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಬಸವರಾಜಪ್ಪ ಕಡೂರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಕೂಡಲೇ ಬೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಇದೇ ವೇಳೆಗೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸೊರಟೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳಲ್ಲಿನ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿರುವುದರಿಂದ ಈ ಮಾರ್ಗವಾಗಿ ರೈತರು ತಮ್ಮ ಜಮೀನುಗಳಿಂದ ಬೆಳೆಗಳನ್ನು ಟ್ರ್ಯಾಕ್ಟರ್ ಮತ್ತಿತರೆ ವಾಹನಗಳ ಮೂಲಕ ಮನೆಗೆ ತರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲುವ ಸಾಧ್ಯತೆಗಳಿದ್ದು, ಕೂಡಲೇ ಬೆಸ್ಕಾಂ ಇಲಾಖೆ ಗ್ರಾಮದ ಮಾರ್ಗಗಳಲ್ಲಿರುವ ವಿದ್ಯುತ್ ತಂತಿಗಳನ್ನು ಮೇಲ್ಮಟ್ಟದಲ್ಲಿರುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥ ಸೊರಟೂರು ಹನುಮಂತಪ್ಪ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
