ಸಂಸ್ಕೃತಿ ಇಲಾಖೆ ವತಿಯಿಂದ ನ.10 ರಂದು ಕಲಾಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಕಾರಿ ಡಿ.ರಂದೀಪ್ ಹೇಳಿದರು.
ಮೈಸೂರು (ಅ.31): ಸಂಸ್ಕೃತಿ ಇಲಾಖೆ ವತಿಯಿಂದ ನ.10 ರಂದು ಕಲಾಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಕಾರಿ ಡಿ.ರಂದೀಪ್ ಹೇಳಿದರು.
ಜಿಲ್ಲಾಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾದ ಜಯಂತಿಯಲ್ಲ, ಎಲ್ಲ ವರ್ಗ ಹಾಗೂ ಸಮುದಾಯದವರ ಕಾರ್ಯಕ್ರಮವಾಗಿದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಎಸ್ಪಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವು ಸಹ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತವಾದ ಬಂದೋಬಸ್ತ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಯಂತಿಯ ಮುಖ್ಯ ಭಾಷಣಕ್ಕೆ ಪತ್ರಕರ್ತ ಟಿ. ಗುರುರಾಜ್, ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹಾಗೂ ತಲಕಾಡು ಚಿಕ್ಕರಂಗೇಗೌಡ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೀತಿ ಮಂದರ್ ಕುಮಾರ್ ಅವರು ಕೋಮು ಸೌಹಾರ್ದ ಬೆಸೆಯುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಜಯಂತಿಯ ದಿನದಂದು ಗೌರವ ಸಮರ್ಪಣೆ ಮಾಡುವಂತೆ ಸಭೆಗೆ ಮನವಿ ಮಾಡಿದರು.
ಬಹುಜನ ವಿದ್ಯಾರ್ಥಿ ಸಂಘದ ಸೊಸಲೆ ಸಿದ್ದರಾಜು ಅವರು, ಟಿಪ್ಪು ಸುಲ್ತಾನ್ ಅವರ ಕಾರ್ಯವೈಖರಿ, ಆಡಳಿತ, ಸಾಧನೆ ಕುರಿತ ಕಿರುಹೊತ್ತಿಗೆ ಮುದ್ರಿಸಿ ನೀಡಿದರೆ ಅವರ ಸಾಧನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು
ಎಂದು ಸಭೆಗೆ ಮನವಿ ಮಾಡಿದರು.
