ಮೋಯ್ಲಿ ಟ್ವೀಟ್ ಬಾಂಬ್ ಸತ್ಯ: ಎಚ್.ವಿಶ್ವನಾಥ್

ticket contract tweet is appreciated by H Vishwanath
Highlights

'ಟಿಕೆಟ್ ಕಾಂಟ್ರಾಕ್ಟ್'ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮಾಡಿರುವ ಟ್ವೀಟಿಗೆ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಬೆಂಬಲಿಸಿದ್ದು, 'ಸಂಸದರು ಸತ್ಯವನ್ನೇ ಹೇಳಿದ್ದಾರೆ,' ಎಂದಿದ್ದಾರೆ.

ಮೈಸೂರು: 'ಟಿಕೆಟ್ ಕಾಂಟ್ರಾಕ್ಟ್'ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮಾಡಿರುವ ಟ್ವೀಟಿಗೆ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಬೆಂಬಲಿಸಿದ್ದು, 'ಸಂಸದರು ಸತ್ಯವನ್ನೇ ಹೇಳಿದ್ದಾರೆ,' ಎಂದಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಟ್ವಿಟರ್ ನೋಡಿ ನನಗೆ ಬಹಳ ಸಂತೋಷವಾಗಿದೆ.  ಎಲ್ಲರೂ ಅವರನ್ನು ಸುಳ್ಳು ಹೇಳುವವರು ಎನ್ನುತ್ತಾರೆ.  ಆದರೆ, ಇದೀಗ ನಿಜವನ್ನೇ ಹೇಳಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಳನ್ನು ಲೋಕೋಪಯೋಗಿ ಸಚಿವ ಮಹದೇವಪ್ಪ ಹಾಗೂ ಪಿಡಬ್ಲುಡಿ ಗುತ್ತಿಗೆದಾರರ ಮೂಲಕ ಮಾರುವ ಆರೋಪ ಸರಿ ಇದೆ, ಎಂದರು.

'ಕಾಂಗ್ರೆಸ್ ಎಲ್ಲವನ್ನೂ ಮಾರಿ ಆಯಿತು. ಈಗ ಪಕ್ಷದ ಟಿಕೆಟನ್ನೂ ಮಾರಲು ಮುಂದಾಗಿರೋದು ರಾಜ್ಯದ ದುರ್ದೈವದ ಸಂಗತಿ. ಪಕ್ಷದಲ್ಲಿನ ಭ್ರಷ್ಟಾಚಾರದ ಬಗ್ಗೆ ನಾನು ಧ್ವನಿ ಎತ್ತಿದ ವರ್ಷದ ಬಳಿಕ‌ ಈಗ ಇವರಿಗೆ ಜ್ಞಾನೋದಯವಾಗಿದೆ. ಇನ್ನೂ ಹಲವರಿಗೆ ಅವರ ಟೆಂಟ್ ಪೂರ್ತಿ ಕಿತ್ತು ಹೋದ ನಂತರ  ಜ್ಞಾನೋದಯವಾಗುತ್ತೆ.  ಎಲ್ಲರಿಗೂ ಈ ವಿಚಾರ ಗೊತ್ತು. ಆದರೆ ಅಧಿಕಾರದ ಕಪಿಮುಷ್ಠಿಯಿಂದ ಕೆಲವರನ್ನ ಕಟ್ಟಿ ಹಾಕಿದ್ರು. ಇನ್ನೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಲ್ಲಿ ಉಳಿದುಕೊಂಡಿದ್ದಾರೆ,' ಎಂದು ಲೇವಡಿ ಮಾಡಿದರು. 

ಇನ್ನು ಸಿಎಂಗೆ ಎಚ್.ಸಿ.ಮಹದೇವಪ್ಪ ಖಜಾನೆ ಇದ್ದಂತೆ. ಈಗ ಕಾಂಗ್ರೆಸ್ ಟಿಕೆಟ್ ಮಾರಿ, ಖಜಾನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.
 

loader