20 ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಡಯಾಲಿಸಿಸ್‌ ಕೇಂದ್ರ | ಕನಕನಪಾಳ್ಯದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆಗಳ ಸ್ಥಾಪನೆ
ಬೆಂಗಳೂರು(ಮಾ. 26): ನಗರದಲ್ಲಿ ಇನ್ನೂ ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಪಾಲಿಕೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನರಿಕ್ ಔಷಧ ಮಳಿಗೆ ತೆರೆಯುವುದು ಸೇರಿದಂತೆ ನಗರದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಬಿಬಿಎಂಪಿ ಬಜೆಟ್ನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಪಾಲಿಕೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬಡ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿ ದೊರಕಿಸುವ ನಿಟ್ಟಿನಲ್ಲಿ ಜನೌಷಧಿ (ಜೆನರಿಕ್ ಮೆಡಿಸಿನ್) ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಲಾಗಿದೆ. ಶಿವಾಜಿನಗರ, ಸರ್ವಜ್ಞನಗರ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಘೊಷಿಸಲಾಗಿದೆ.
ನೂತನವಾಗಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಗಳಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲು ಉದ್ದೇಶಿಸಲಾಗಿದೆ. ಪಾಲಿಕೆಯ ರೆಫರಲ್ ಆಸ್ಪತ್ರೆಯಲ್ಲಿ ತುರ್ತು ಸಂದರ್ಭಗಳಲ್ಲಿ ನುರಿತ ತಜ್ಞ ವೈದ್ಯರ ಸೇವೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸಲಾಗುವುದು. ನಾಗರಿಕ ಸೇವೆ ಉತ್ತಮಗೊಳಿಸಲು ಸಂಚಾರಿ ಆರೋಗ್ಯ ಘಟಕಗಳ ಆರಂಭಕ್ಕೆ 3 ಕೋಟಿ ರು, ಹೃದಯ ರೋಗಿಗಳ ಆಂಜಿಯೋ ಪ್ಲಾಸ್ಟ್ ಚಿಕಿತ್ಸೆಯಲ್ಲಿ ಬಳಸುವ ಕೊರೋನರಿ ಸ್ಟಂಟ್ಸ್ಗಳನ್ನು ಪಾಲಿಕೆಯಿಂದ ಅರ್ಹ ಬಡ ಮತ್ತು ಮಧ್ಯಮ ವರ್ಗದ ಹೃದಯ ರೋಗಿಗಳಿಗೆ ವಿತರಿಸಲು ಉದ್ದೇಶಿಸಿದ್ದು, ಇದಕ್ಕಾಗಿ 4 ಕೋಟಿ ರೂ. ಒದಗಿಸಿದೆ. ಹಿರಿಯ ನಾಗರಿಕರ ಆರೋಗ್ಯ ಸೇವೆಗಾಗಿ ಟೌನ್ಹಾಲ್ನಲ್ಲಿರುವ ದಾಸಪ್ಪ ಆಸ್ಪತ್ರೆಯಲ್ಲಿ ನನರಲ್ ಒಪಿಡಿ ಮತ್ತು ಡೇ ಕೇರ್ ಸೆಂಟರ್ಗಳನ್ನು ಆರಂಭಿಸಲಾಗುವುದು. ಕ್ಯಾನ್ಸರ್ ತಪಾಸಣೆಗೆ 6 ರೆಫರಲ್ ಆಸ್ಪತ್ರೆಗಳಿಗೆ ಮ್ಯಾಮೋರಾಮ್ ಮಶಿನ್ಗಳನ್ನು ಒದಗಿಸಲು 1 ಕೋಟಿ ರು. ನೀಡಲಾಗಿದೆ. ಜಯನಗರದ ಕನಕನಪಾಳ್ಯದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ 40 ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇವುಗಳ ಸಾರ್ವಜನಿಕ ಸಹಭಾಗಿತ್ವ ನಿರ್ವಹಣೆಗೆ 30 ಕೋಟಿ ರು. ಮೀಸಲಿಡಲಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಘಟಕಗಳ ಅಭಿವೃದ್ಧಿಗೆ 73 ಕೋಟಿ ರು. ಮೀಸಲಿಡಲಾಗಿದೆ. ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ 196.16 ಕೋಟಿ ರು.ಗಳನ್ನು ಬಜೆಟ್ನಲ್ಲಿ ಮೀಸಲಿಡಸಲಾಗಿದೆ. ಆರೋಗ್ಯ ಸಾಮಾನ್ಯ ಇಲಾ ಖೆಗೆ 23.45 ಕೊಟಿ ರೂ. ನೀಡಿದ್ದು, 8 ವಲಯಗಳಲ್ಲಿ ಪ್ರಾಣಿಗಳ ಚಿತಾಗಾರ 2 ಕೋಟಿ ರು. ಅನುದಾನ, ಪ್ರಾಣಿಗಳನ್ನುಹಿಡಿಯುವ ವಾಹನ, ಶವ ಸಾಗಿಸುವ ವಾಹನ, ಸತ್ತ ಪ್ರಾಣಿ ಸಾಗಾಣಿಕೆ ವಾಹನಗಳ ಖರೀದಿಗೆ 2.80 ಕೋಟಿ ರು ಮತ್ತು ಬೀದಿ ನಾಯಿಗಳ ಸಂತಾಹ ನಿಯಂತ್ರಣ ಕಾರ್ಯಕ್ರಮಕ್ಕೆ 3 ಕೋಟಿ ರು. ಮೀಸಲಿಡಲಾಗಿದೆ.
ಬಜೆಟ್'ನಲ್ಲಿನ ಎಲ್ಲಾ ಘೋಷಣೆಗಳು ಸ್ವಾಗತಾರ್ಹ. ಆದರೆ, ಯೋಜನೆಗಳ ಅನುಷ್ಠಾನಕ್ಕೆ ನೀಡಿರುವ ಅನುದಾನ ಸಾಲದು. ಕೇವಲ ವೆಂಟಿಲೇಟರ್ ಅಳವಡಿಸಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗುವುದಿಲ್ಲ. ಉತ್ತಮ ತಜ್ಞ ವೈದ್ಯರು ಬೇಕು, ಅತ್ಯಾಧುನಿಕ ಯಂತ್ರೋಪರಣಗಳು ಬೇಕು.ಹಿರಿಯ ನಾಗರಿಕರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗಳೂ ಒಂದೇ ಕಡೆ ಸಿಗುವಂತಾಗಬೇಕೆಂಬ ಬೇಡಿಕೆ ಹಲವು ದಿನಗಳಿಂದ ಇದೆ. ಈ ಬಾರಿಯೂ ಆಗಿಲ್ಲ.
- ಜಿ ಟಿ ಸುಭಾಷ್, ಬೆಂಗಳೂರು ಮೆಡಿಕಲ್ ಕಾಲೇಜಿನ ಮಾಜಿ ನಿರ್ದೇಶಕ
ಕನ್ನಡಪ್ರಭ ವಾರ್ತೆ
epaper.kannadaprabha.in
