- ರಸ್ತೆಗೆಸೆದ ಕಸ ತೆಗೆದು ಸ್ವಚ್ಛಗೊಳಿಸುವ ಯುವಕರ ತಂಡ- ಅದೇ ಜಾಗದಲ್ಲಿ ಮತ್ತೆ ಕೆಸವೆಸೆಯುತ್ತಿದ್ದ ಅಂಗಡಿ ವಿರುದ್ಧ ಆಕ್ರೋಶ-ಅಂಗಡಿಗೇ ಕಸ ತಂದು ಹಾಕಿ, ಸ್ವಚ್ಛತಾ ಪಾಠ

ಮಂಗಳೂರು: ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವ ಕೀರ್ತನೆಯನ್ನು ಮಂಗಳೂರಿನ ನಾಗರಿಕರೊಬ್ಬರು ಅಕ್ಷರಶಃ ಸಾಕಾರಗೊಳಿಸಿದ್ದಾರೆ! ಅಂಗಡಿಯವರು ರಸ್ತೆಯಲ್ಲಿ ಬಿಸಾಡಿದ ಕಸವನ್ನು ಅದೇ ಅಂಗಡಿಯೊಳಗೆ ಸುರಿದು ವಿನೂತನ ರೀತಿಯಲ್ಲಿ ಸ್ವಚ್ಛತೆಯ ‘ಪಾಠ’ ಕಲಿಸಿದ ಘಟನೆ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ನಾಗರಿಕನ ಪ್ರಜ್ಞಾವಂತಿಕೆಗೆ ಜಾಲತಾಣದಲ್ಲಿ ಶಹಬ್ಬಾಸ್ ದೊರೆಯುತ್ತಿದೆ. ನಗರದ ಕರಂಗಲ್ಪಾಡಿಯಲ್ಲಿರುವ ಬ್ರಾಂಡೆಡ್ ಬಟ್ಟೆ ಮಳಿಗೆಯವರು ತಮ್ಮ ಅಂಗಡಿಯ ಕಸವನ್ನು ರಸ್ತೆಗೆ ಎಸೆದಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆ ಕಸವನ್ನು ಅದೇ ಅಂಗಡಿಗೆ ತಂದು ಎಲ್ಲರೆದುರಲ್ಲೇ ಅದನ್ನು ಸುರಿದರು.

ಮಾತ್ರವಲ್ಲ ಇಡೀ ಘಟನೆಯನ್ನು ಲೈವ್ ವಿಡಿಯೊ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೊದಲ್ಲೇನಿದೆ: ಅಂಗಡಿಗೆ ಕಸದೊಂದಿಗೆ ಆಗಮಿಸಿದ ವ್ಯಕ್ತಿಯು ಮಳಿಗೆಯ ಕೆಲಸಗಾರರೊಂದಿಗೆ ‘ನಿನ್ನೆ ಇದೇ ಜಾಗವನ್ನು ನಾವು ಸ್ವಚ್ಛಗೊಳಿಸಿದ್ದೆವು. ಈಗ ನೀವು ರಸ್ತೆಯಲ್ಲಿ ಕಸ ತಂದು ಹಾಕಿದ್ದೀರಿ. ಪಕ್ಕದಲ್ಲೇ ಕಸದ ತೊಟ್ಟಿ ಇಟ್ಟದ್ದು ಕಾಣಿಸುವುದಿಲ್ಲವೇ? ಇದೇ ಕಸವನ್ನು ನಾನೀಗ ನಿಮ್ಮ ಅಂಗಡಿಯಲ್ಲಿ ಸುರಿದರೆ ಏನೆನಿಸುತ್ತದೆ’ ಎಂದು ಹೇಳಿ ಕಸವನ್ನು ಅಂಗಡಿಯೊಳಗೇ ಸುರಿದುಬಿಟ್ಟರು. ಮಾತ್ರವಲ್ಲ, ಒಟ್ಟು ನಾಲ್ಕು ನಿಮಿಷಗಳ ಕಾಲ ಮಳಿಗೆ ಕೆಲಸಗಾರರಿಗೆ ಸ್ವಚ್ಛತೆ ಕಾಪಾಡುವ ಕುರಿತು ಸುದೀರ್ಘ ಪಾಠ ಮಾಡಿದರು. ಇನ್ನು ಮುಂದೆ ಕಸವನ್ನು ಬೇಕಾಬಿಟ್ಟಿ ಬಿಸಾಡದಂತೆ ಎಚ್ಚರಿಕೆ ನೀಡಿದರು.