ಕಾಂಗ್ರೆಸ್ ಸರ್ಕಾರದಿಂದ ರಾಜಕೀಯ ಮೌಲ್ಯ ಅಪಹಾಸ್ಯಕ್ಕೆ ಈಡಾಗುತ್ತಿದ್ದು ಮುಖ್ಯಮಂತ್ರಿಗಳು ಕೂಡಲೇ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ಶಿವಮೊಗ್ಗ (ಡಿ.15): ಕಾಂಗ್ರೆಸ್ ಸರ್ಕಾರದಿಂದ ರಾಜಕೀಯ ಮೌಲ್ಯ ಅಪಹಾಸ್ಯಕ್ಕೆ ಈಡಾಗುತ್ತಿದ್ದು ಮುಖ್ಯಮಂತ್ರಿಗಳು ಕೂಡಲೇ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ವೈ. ಮೇಟಿ ಯವರ ರಾಸಲೀಲೆಯನ್ನು ಪಕ್ಷಭೇದ ಮರೆತು ಖಂಡಿಸಬೇಕಾಗಿದೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಇನ್ನು ಅವರ ಪರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಅದರಲ್ಲೂ ಕಾಗೋಡು ತಿಮ್ಮಪ್ಪನಂತಹ ಹಿರಿಯರು ಅದೇನು ತಪ್ಪೇ ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ದಿನೇಶ್ ಗುಂಡೂರಾವ್ ಅವರು ಅದೊಂದು ವೈಯುಕ್ತಿಕ ವಿಚಾರ ಎಂದು ಹೇಳುತ್ತಿರುವುದು ಅಪಹಾಸ್ಯ ಎಂದರು.
ಕಾಂಗ್ರೆಸ್ ಸರ್ಕಾರದ ಸಚಿವರ ಇಂತಹ ವರ್ತನೆಗಳು ಕೆಟ್ಟ ಹೆಸರು ತರುತ್ತಿವೆ. ರಾಜಕೀಯ ಮೌಲ್ಯವನ್ನೇ ಇವರು ಅಪಮೌಲ್ಯಗೊಳಿಸುತ್ತಿದ್ದಾರೆ. ಇವರು ಮಾಡುತ್ತಿರುವ ಕೆಲಸಗಳು ವಿವೇಕರಹಿತವಾಗಿದ್ದು ಸಂಸ್ಕೃತಿಯೇ ಅಲ್ಲ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಇಂತಹ ಕಳಂಕಿತ ಸಚಿವರನ್ನು ತೆಗೆದುಹಾಕಬೇಕು ತಕ್ಷಣವೇ ಅವರು ಇಡೀ ಸಂಪುಟವನ್ನು ಪುನರ‌್ರಚಿಸಬೇಕು ಎಂದರು.
ಮೇಟಿ ರಾಸಲೀಲೆಯನ್ನು ದಯವಿಟ್ಟು ತೋರಿಸಬೇಡಿ ಎಂದು ಟಿವಿ ಮಾಧ್ಯಮದವರಲ್ಲಿ ಮನವಿ ಮಾಡಿದ ಅವರು, ಈ ರಾಸಲೀಲೆ ಪ್ರಕರಣವು ನೋಡಲು ಕೂಡ ಅಸಹ್ಯವಾಗಿದೆ. ಕುಟುಂಬದವರು ಕುಳಿತು ನೋಡುವಂತದ್ದೇ ಅಲ್ಲ, ಇಲ್ಲಿಯವರೆಗೂ ಆಗಿದ್ದೇ ಸಾಕು ತಕ್ಷಣವೇ ನಿಲ್ಲಿಸಿಬಿಡಿ ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಬರ ನಿರ್ವಹಣೆಯಲ್ಲಿ ವಿಫಲ:
ರಾಜ್ಯ ಸರ್ಕಾರ ರೈತರ ಪರವಾಗಿ ಇಲ್ಲ. ನಾಲ್ಕು ವರ್ಷದಿಂದ ಬರಗಾಲವಿದೆ. ಬೆಳೆಹಾನಿಯಾಗಿದೆ. ಮುಖ್ಯಮಂತ್ರಿಗಳು ಕೇಂದ್ರದ ಕಡೆ ಇನ್ನು ಬೊಟ್ಟು ತೋರಿಸುವುದು ಬಿಟ್ಟಿಲ್ಲ. ಕೇಂದ್ರದಿಂದ ಬಂದ ಶೇ.68 ರಷ್ಟು ಹಣವನ್ನು ಮಾತ್ರ ರೈತರಿಗೆ ಸರ್ಕಾರ ನೀಡಿದೆ. ತನ್ನ ಪಾಲಿನ ಶೇ.32ರಷ್ಟು ಹಣವನ್ನು ಪರಿಹಾರ ನೀಡಿಲ್ಲ. ಮೊದಲು ಈ ಹಣವನ್ನು ನೀಡಿ ಎಂದು ಈಶ್ವರಪ್ಪ ಟೀಕಿಸಿದರು.
ನೀವು ಅರ್ಧ ಸಾಲ ಮನ್ನಾ ಮಾಡಿದರೆ ಉಳಿದರ್ಧ ನಾವು ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿಯವರು ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ. ಇಂತಹ ಷರತ್ತುಗಳೇಕೆ? ರಾಜ್ಯ ಸರ್ಕಾರದ ಬಳಿ ಸಾಲ ಮನ್ನಾ ಮಾಡುವಷ್ಟು ಹಣ ಇದೆ ಎಂದೇ ಇದರ ಅರ್ಥ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ನಾವೂ ಸಾಲ ಮನ್ನಾ ಮಾಡಿದ್ದೆವು. ಅಂತದ್ದೇ ಕ್ರಮವನ್ನು ಈಗಲೂ ತೆಗೆದುಕೊಳ್ಳಲಿ ಎಂದು ಈಶ್ವರಪ್ಪ ಒತ್ತಾಯಿಸಿದರು.
ನನ್ನ- ಬಿಎಸ್‌ವೈ ನಡುವೆ ‘ಬ್ರಿಗೇಡ್ ಗ್ಯಾಪ್’ ಇರೋದು ನಿಜ. ನನ್ನ ಮತ್ತು ಯಡಿಯೂರಪ್ಪ ನಡುವೆ ಗ್ಯಾಪ್ ಇರೋದು ನಿಜ. ಸ್ವಲ್ಪ ಗೊಂದಲವೂ ಇದೆ. ಆದರೆ ಇಬ್ಬರೂ ಪಕ್ಷದ ವರಿಷ್ಠರು ಹಾಗೂ ಪರಿವಾರದ ಹಿರಿಯರು ಹೇಳುವ ಮಾತುಗಳನ್ನು ಕೇಳುತ್ತೇವೆ. ಹಾಗಾಗಿ ಎಲ್ಲವೂ ಬಗೆಹರಿಯಲಿದೆ ಎಂದು ಕೆ.ಎಸ್. ಈಶ್ವರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
