ಬೆಂಗಳೂರಿನ ಪ್ರಸಿದ್ಧ ಚಿತ್ರ ಮಂದಿರ ಕ್ಲೋಸ್

The Show Ends at Nataraj theatre
Highlights

ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅಭಿನಯಿಸಿರುವ ‘ಪರೋಪರಕಾರಿ’ ಚಿತ್ರ ಪ್ರದರ್ಶನದ ಮೂಲಕ ಆರಂಭವಾದ, ಖ್ಯಾತ ಕಲಾವಿದರಾದ ರಜನಿಕಾಂತ್, ಕಮಲಹಾಸನ್ ಸೇರಿದಂತೆ ವಿವಿಧ ಭಾಷೆಗಳ ಖ್ಯಾತ ನಟರು ಅಭಿನಯಿಸಿದ ಚಿತ್ರಗಳನ್ನು ಪ್ರದರ್ಶಿಸಿದ ನಗರದ ‘ನಟರಾಜ’ ಚಿತ್ರಮಂದಿರ ಇನ್ನು ಇತಿಹಾಸ ಪುಟ ಸೇರಲಿದೆ!

ಬೆಂಗಳೂರು : ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅಭಿನಯಿಸಿರುವ ‘ಪರೋಪರಕಾರಿ’ ಚಿತ್ರ ಪ್ರದರ್ಶನದ ಮೂಲಕ ಆರಂಭವಾದ, ಖ್ಯಾತ ಕಲಾವಿದರಾದ ರಜನಿಕಾಂತ್, ಕಮಲಹಾಸನ್ ಸೇರಿದಂತೆ ವಿವಿಧ ಭಾಷೆಗಳ ಖ್ಯಾತ ನಟರು ಅಭಿನಯಿಸಿದ ಚಿತ್ರಗಳನ್ನು ಪ್ರದರ್ಶಿಸಿದ ನಗರದ ‘ನಟರಾಜ’ ಚಿತ್ರಮಂದಿರ ಇನ್ನು ಇತಿಹಾಸ ಪುಟ ಸೇರಲಿದೆ!

ಒಂದು ಕಾಲದಲ್ಲಿ ಚಿತ್ರ ರಸಿಕರ ತಾಣವಾಗಿದ್ದ ಬೆಂಗಳೂರಿನ ಅನೇಕ ಚಿತ್ರಮಂದಿರಗಳು ಒಂದೊಂದಾಗಿ ನಾನಾ ಕಾರಣಗಳಿಂದ ನೆಲಸಮವಾಗಿ ಅಲ್ಲಿ ಮಾಲ್, ವಾಣಿಜ್ಯ ಸಂಕೀರ್ಣಗಳಾಗಿ ಪರಿವರ್ತನೆಯಾಗುತ್ತಿವೆ. ಇವುಗಳ ಸಾಲಿನಲ್ಲಿ ಈಗ ನಟರಾಜ ಚಿತ್ರಮಂದಿರ ಸೇರಲಿದೆ. 1200ಆಸನ ಇರುವ ಬೆಂಗಳೂರು ನಗರದ ಎರಡನೇ ಅತಿ ದೊಡ್ಡ ಚಿತ್ರಮಂದಿರ (ಕಪಾಲಿ ಮೊದಲನೆಯದು) ಎಂಬ ಹೆಗ್ಗಳಿಗೆ ಪಾತ್ರವಾಗಿದ್ದ ನಟರಾಜ ಚಿತ್ರಮಂದಿರವನ್ನು ಕರ್ನಾಟಕ ರಾಜ್ಯದ ಐದನೇ ರಾಜ್ಯಪಾಲರಾಗಿದ್ದ ಧರ್ಮವೀರ ಅವರು 1970ರಲ್ಲಿ ಲೋಕಾರ್ಪಣೆ ಮಾಡುವ ಮೂಲಕ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು.

ಸುಮಾರು48 ವರ್ಷಗಳ ಕಾಲ ವಿವಿಧ ಭಾಷೆಗಳ ಚಿತ್ರಗಳ ಪ್ರದರ್ಶನ ಮಾಡಿದ್ದ ನಟರಾಜ ಚಿತ್ರಮಂದಿರ ಶ್ರೀರಾಮಪುರ ಹಾಗೂ ಮಲ್ಲೇಶ್ವರದ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿರುವ ತಮಿಳು ಭಾಷಿಕರ ಪ್ರಮುಖ ಮನೋರಂಜನಾ ಕೇಂದ್ರವಾಗಿತ್ತು.

ಶೇಷಾದ್ರಿಪುರ ಹಾಗೂ ಮಲ್ಲೇಶ್ವರದ ಸಂಪರ್ಕ ಕೊಂಡಿಯಂತಿರುವ ಸ್ವಸ್ತಿಕ್ ವೃತ್ತದಲ್ಲಿರುವ ಈ ಚಿತ್ರಮಂದಿರದಲ್ಲಿ ಕನ್ನಡವೂ ಸೇರಿದಂತೆ ಹಿಂದಿ, ತೆಲುಗು, ತಮಿಳು ಭಾಷೆಗಳ ಚಿತ್ರಗಳು ಪ್ರದರ್ಶನಗೊಂಡಿದ್ದರೂ ಇತ್ತೀಚಿನ ವರ್ಷಗಳಲ್ಲಿ ತಮಿಳು ಭಾಷೆಯ ಚಿತ್ರಗಳು ಹೆಚ್ಚು ಪ್ರದರ್ಶನಕ್ಕೆ ಮೀಸಲಾಗಿತ್ತು, ಇತರ ಭಾಷೆಗಳ ಚಿತ್ರಗಳನ್ನು ಪ್ರದರ್ಶನ ಮಾಡಿದರೂ ನೋಡುಗರ ಸಂಖ್ಯೆ ಹೆಚ್ಚಾಗದ ಪರಿಣಾಮದಿಂದ ಕೇವಲ ತಮಿಳು ಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು.

ಬಾಂಬೆ ತಂತ್ರಜ್ಞಾನ: ಎಪ್ಪತ್ತರ ದಶಕದಲ್ಲಿ ಚಿತ್ರಮಂದಿರ ನಿರ್ಮಾಣದಲ್ಲಿ ಹೆಸರು ಗಳಿಸಿದ್ದ ಬಾಂಬೆಯ ಖ್ಯಾತ ವಾಸ್ತುಶಿಲ್ಪಿ ರಾಜ್‌ಧನ್ ಅವರು ನಟರಾಜ ಚಿತ್ರಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಬೆಂಗಳೂರು ನಗರದಲ್ಲಿ ಕಪಾಲಿ ಚಿತ್ರಮಂದಿರ ಹಾಗೂ ನಟರಾಜ ಚಿತ್ರಮಂದಿರಗಳಿಗೆ ಮಾತ್ರ ರಾಜ್‌ಧನ್ ಅವರು ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.

ನಟರಾಜ ಚಿತ್ರ ಮಂದಿರ ಆರಂಭವಾದ ದಿನಗಳಲ್ಲಿ ಕನ್ನಡ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ, ತಮಿಳು ಚಿತ್ರಗಳನ್ನು ಹೊರತು ಪಡಿಸಿ ಇತರೆ ಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಬರುತ್ತಿರಲಿಲ್ಲ. ಪರಿಣಾಮದಿಂದ ಈ ಚಿತ್ರ ಮಂದಿರದಲ್ಲಿ ತಮಿಳು ಚಿತ್ರಗಳನ್ನೇ ಹೆಚ್ಚು ಪ್ರಮಾಣದಲ್ಲಿ ಪ್ರದರ್ಶನ ಮಾಡುತ್ತಿದ್ದೆವು ಎಂದು ಗುತ್ತಿಗೆದಾರರಾಗಿದ್ದ ಯಶೋಧಗೌಡ ಅವರ ಅಳಿಯ ಎಸ್.ಕೆ. ಪುಟ್ಟಣ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆಗೆ ವಿಚಾರ ಸಂಬಂಧ ನಡೆಯುವ ಗಲಾಟೆ ವೇಳೆ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲು ಪೊಲೀಸರು ಸೂಚಿಸುತ್ತಿದ್ದರು.

loader