ಕಾವೇರಿ ತೆರೆದ ಕೊಳವೆ ಬಾವಿಗೆ ಬಿದ್ದು ಒಂದು ದಿನ ಪೂರ್ಣಗೊಂಡಿದೆ. ಆದರೆ ಕಾರ್ಯಾಚರಣೆಗೆ ಹಲವಾರು ತೊಡಕುಗಳು ಉಂಟಾಗಿದ್ದು, ಹಟ್ಟಿ ಗಣಿ ಮತ್ತು NDRF ಸಿಬ್ಬಂದಿ ಕಾವೇರಿಗಾಗಿ ತಮ್ಮ ಶೋಧಕಾರ್ಯ ಮುಂದುವರೆಸಿದ್ದಾರೆ. ಒಂದೊಂದು ಪ್ರಯತ್ನವೂ ವಿಫಲವಾದಂತೆಯೂ, ಪರ್ಯಾಯ ಮಾರ್ಗಗಳನ್ನು ಹುಡುಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಳಗಾವಿ(ಎ.24): ಕಾವೇರಿ ತೆರೆದ ಕೊಳವೆ ಬಾವಿಗೆ ಬಿದ್ದು ಒಂದು ದಿನ ಪೂರ್ಣಗೊಂಡಿದೆ. ಆದರೆ ಕಾರ್ಯಾಚರಣೆಗೆ ಹಲವಾರು ತೊಡಕುಗಳು ಉಂಟಾಗಿದ್ದು, ಹಟ್ಟಿ ಗಣಿ ಮತ್ತು NDRF ಸಿಬ್ಬಂದಿ ಕಾವೇರಿಗಾಗಿ ತಮ್ಮ ಶೋಧಕಾರ್ಯ ಮುಂದುವರೆಸಿದ್ದಾರೆ. ಒಂದೊಂದು ಪ್ರಯತ್ನವೂ ವಿಫಲವಾದಂತೆಯೂ, ಪರ್ಯಾಯ ಮಾರ್ಗಗಳನ್ನು ಹುಡುಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶನಿವಾರ ಸಂಜೆ ತೆರೆದ ಬಾವಿಗೆ ಕಾವೇರಿ ಬಿದ್ದಿದ್ದು, ಆಕೆಯನ್ನು ಮೇಲೆತ್ತಲು ತಾಯಿ ಸವಿತ ಬೋರ್​ವೆಲ್'ಗೆ ಹಗ್ಗ ಬಿಟ್ಟು ಯತ್ನಿಸಿದ್ದಾಳೆ. ಆದರೆ ಆಕೆಯ ಪ್ರಯತ್ನ ವಿಫಲವಾಗಿದೆ. ಆಕೆ ಬಿಟ್ಟಿದ್ದ ಹಗ್ಗ ಬೋರ್​ವೆಲ್ ನಲ್ಲೇ ಉಳಿದಿದೆ. ಆ ಬಳಿಕ ಜಿಲ್ಲಾಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಬಳಿಕ ನಡೆದ ಕಾರ್ಯಾಚರಣೆ ಹೀಗಿತ್ತು.

ಕಾವೇರಿ ಕಾರ್ಯಾಚರಣೆ

ತಮ್ಮನ ಜೊತೆ ಆಟವಾಡುತ್ತಾ ಬಂದ ಕಾವೇರಿ ಶನಿವಾರನೆ ಸಂಜೆ 5.30 ರ ಸುಮಾರಿಗೆ ಬೋರ್ ವೆಲ್ ಒಳಗೆ ಬಿದ್ದಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಕೊಳವೆ ಬಾವಿಯಿಂದ ಕಾವೇರಿ ಧ್ವನಿ ತಾಯಿ ಸವಿತಾಳಿಗೆ ಕೇಳಿಸಿದ್ದು, ಮಗಳನ್ನು ಮೇಲೆತ್ತಲು ಹಗ್ಗ ಬಿಟ್ಟು ಯತ್ನಿಸಿದ್ದಾಳೆ. ನಂತರ ಸ್ಥಳೀಯರ ಯತ್ನ ಕೂಡ ವಿಫಲವಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ, ಕಾರ್ಯಾಚರಣೆ ಕೈಗೊಂಡು, 8. 30ರ ಸುಮಾರಿಗೆ ಜೆಸಿಬಿ ಮೂಲಕ ಪರ್ಯಾಯ ಸುರಂಗ ಮಾರ್ಗ ಕೊರೆಯೋ ಕಾರ್ಯ ಆರಂಭವಾಗಿತ್ತು.

ಸುಮಾರು 9.30ರ ವೇಳೆಗೆ ಕಾವೇರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತು. ಆದರೆ ಜಮೀನಿನಲ್ಲಿನ ಬಂಡೆಕಲ್ಲುಗಳು ಕಾರ್ಯಾಚರಣೆಗೆ ತೊಡಕಾದವು. 11.30ರ ವೇಳೆಗೆ ಹಟ್ಟಿ ಗಣಿ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಆಗಮಿಸಿದ್ದರು. ಬಳಿಕ ರಾತ್ರಿ 1 ರ ಸುಮಾರಿಗೆ NDRF ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಮುಂದುವರೆಸಿದರು. ಆದರೆ ಬೃಹತ್ ಬಂಡೆ ಅಡ್ಡಲಾಗಿದ್ದರಿಂದ ವಿಳಂಬಗೊಂಡ ಕಾರಣ ಕಾರ್ಯಚರಣೆಯನ್ನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನ ನಿನ್ನೆ ಮುಂಜಾನೆ 5ಕ್ಕೆ ಪುನರಾರಂಭಿಸಿದ್ದು, ಕೆಲ ಹೊತ್ತಿನಲ್ಲೇ ಬೋರ್ ವೆಲ್ ಒಳಗೆ ಕಾವೇರಿಯ ಬಟ್ಟೆ ಕಂಡು ಬಂತು. ನಂತರ ಸಕ್ಕಿಂಗ್ ಬಳಸಿ ಮಣ್ಣು ತೆಗೆಯುವ ಪ್ರಯತ್ನವು ವಿಫಲವಾಯಿತು. 8.20ರಿಂದ 10ರ ವರೆಗೂ ಹುಕ್ ಬಳಕೆಯ ಮೂಲಕ ಕಾವೇರಿಯನ್ನು ಮೇಲೆತ್ತುವ ಎಲ್ಲಾ ಯತ್ನಗಳು ಕೈ ಕೊಟ್ಟಿವು. ನಂತರ ಮಧ್ಯಾಹ್ನ 1.20ರ ಸುಮಾರಿಗೆ ಕಾರ್ಯಾಚರಣೆ ತೀವ್ರಗೊಂಡು, ಸಂಜೆ 4 ರ ವೇಳೆಗೆ ಅಡ್ಡಿಯಾದ ಕಲ್ಲುಗಳನ್ನು ಪುಡಿಗೊಳಿಸಲು 3 ಬೋರ್ ಕೊರೆಯಿಸಲು ತೀರ್ಮಾನಿಸಲಾಯ್ತು. ನಂತ್ರ ಸಂಜೆ 6.20 ರವೇಳೆಗೆ ಕೊನೆಯ ಪರ್ಯಾಯವಾಗಿ ಸುರಂಗ ಮಾರ್ಗವನ್ನು ಕೊರೆಯಲು ನಿರ್ಧರಿಸಿ, ಕಾವೇರಿ ಬಿದ್ದಿರುವ ಬಾವಿ ಸುತ್ತ 20 ಬೋರ್'ಗಳನ್ನು ಕೊರೆಯಲು ನಿರ್ಧರಿಸಲಾಯಿತು.

ಇಷ್ಟೊಂದು ಹರ ಸಾಹಸದ ನಂತರವೂ ಕಾವೇರಿಯನ್ನು ಹೊರತೆಗೆಯೋ ಕಾರ್ಯ ಇನ್ನೂ ಸಫಲವಾಗಿಲ್ಲ. ನಿರಂತರ ಪ್ರಯತ್ನಗಳು ಮುಂದು ವರೆದಿದ್ದು ಕಾವೇರಿ ಹೊರ ಬರುವ ಆಸೆಯಲ್ಲೇ ಇಡಿ ಕರ್ನಾಟಕ ಎದುರು ನೋಡುತ್ತಿದೆ.