ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ: ಶ್ರೀನಿವಾಸ್ ಪ್ರಸಾದ್

First Published 21, Jan 2018, 6:06 PM IST
Srinivas prasad slams CM Siddaramaiah
Highlights

'ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಉಡಾಫೆ ಸಿಎಂ. ಸಮಾಜವಾದಿಯಲ್ಲ, ಮಜಾವಾದಿ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.


ಕೊಳ್ಳೇಗಾಲ: 'ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಉಡಾಫೆ ಸಿಎಂ. ಸಮಾಜವಾದಿಯಲ್ಲ, ಮಜಾವಾದಿ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.

ಇಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, 'ಸಿದ್ದರಾಮಯ್ಯ ದುರಹಂಕಾರದ ಮುಖ್ಯಮಂತ್ರಿ. 80 ಲಕ್ಷ ರೂ. ಬೆಲೆ ಬಾಳುವ ವಜ್ರದ ಹರಳು ಇರುವ ವಾಚ್ ಕಟ್ಟುತ್ತಾರೆ.  ಇದು ಸಮಾಜವಾದಿಯ ಲಕ್ಷಣವೇ? ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಚುನಾವಣೆ ನಡೆಸಿದ ರೀತಿ ನಾಚಿಕೆಗೇಡು,' ಎಂದರು. 

'ನಂಜನಗೂಡು ಉಪಚುನಾವಣೆ ಚುನಾವಣೆ ನಡೆಸಿದ ರೀತಿ ನಾಚಿಕೆಗೇಡು. ಅಹಿಂದ ಮತವನ್ನ ಮಾರಾಟದ ವಸ್ತುವನ್ನಾಗಿ ಖರೀದಿಸಿ ಗೆದ್ದರು. ಗೃಹ ಇಲಾಖೆ ಕೆಂಪಯ್ಯನ ಬ್ರಿಗೇಡ್ ಆಗಿದೆ. ಗೃಹ ಇಲಾಖೆ ಸಚಿವರ ಕೈಯಲ್ಲಿರದೆ ಸಲಹೆಗಾರರಾದ ಕೆಂಪಯ್ಯನ ಕೈಯಲ್ಲಿದೆ. ಸರ್ಕಸ್‌ನ ರಿಂಗ್ ಮಾಸ್ಟರ್ ಆಗಿದ್ದಾರೆ ರಾಜ್ಯದ ಮುಖ್ಯಮಂತ್ರಿ,' ಎಂದು ಆರೋಪಿಸಿದರು. 

'ಖರ್ಗೆಗೆ ನೈತಿಕತೆ ಇಲ್ಲ. ದಲಿತ ನಾಯಕರನ್ನ ಸಿದ್ದರಾಮಯ್ಯ ಮುಗಿಸಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕೊಚ್ಚಿ ಹೋಗಲಿದೆ. ಹದ್ದು ಎಷ್ಟೇ ಮೇಲಕ್ಕೆ ಹೋದರೂ ಆಹಾರಕ್ಕಾಗಿ ನೆಲಕ್ಕೆ ಬರಲೇ ಬೇಕು. ಅದೇ ರೀತಿ ಸಿದ್ದರಾಮಯ್ಯ ಸಹ ಮೂರು ತಿಂಗಳ ನಂತರ ಮತದಾರರ ಬಳಿ ಬರಲೇ ಬೇಕು. ಅವರಿಗೆ ಕೈ ಮುಗಿಯಲೇ ಬೇಕು,' ಎಂದು ವಾಗ್ದಾಳಿ ನಡೆಸಿದರು.

loader