ದಾವಣಗೆರೆ(ಅ.27): ತಲಾಖ್ ನಿಷೇಧದ ಪ್ರಸ್ತಾಪಕ್ಕೆ ದಾವಣಗೆರೆ ಮುಸ್ಲಿಂ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಲಾಖ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಗುರುವಾರ ಮುಸ್ಲಿಂ ಸಂಘ ಸಂಸ್ಥೆಗಳ ಒಕ್ಕೂಟದಿಂದ ಮುಸ್ಲಿಂ ಮಹಿಳೆಯರು ಸಹಿ ಸಂಗ್ರಹ ಅಭಿಯಾನ ನಡೆಸಿದರು.

ನಗರದ ಮಿಲ್ಲತ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮಿಲ್ಲತ್ ವಿದ್ಯಾಸಂಸ್ಥೆ ಮತ್ತು ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಸೈಯದ್ ಸೈಫುಲ್ಲಾ ಭಾ ರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕಾಗಿದ್ದು, ಏಕರೂಪ ನಾಗರಿಕ ಸಂಹಿತೆಯ ಮೂಲಕ ಸಮಾಜದ ವೈಯಕ್ತಿಕ ವಿಚಾರ ವಾಗಿರುವ ತಲಾಖ್ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು ಎಂದು ಆಗ್ರಹಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಣ್ಣ ವಿಷಯಗಳಿಗೆ ಕೈಹಾಕುವುದು ಸಮಂಜಸವಲ್ಲ. ತಲಾಖ್ ನೀಡುವುದರಿಂದ ಮುಸ್ಲಿಂ ಮಹಿಳೆಯರ ಮೂಲೆಗುಂಪು ಮಾಡುವುದು ಸಾಧ್ಯವಿಲ್ಲ. ಅಂಥವರಿಗೆ ಪರಿಹಾರ ನೀಡುವಂತಹ ಕೆಲಸ ಮಾಡಬೇಕು. ಎಲ್ಲರನ್ನು ಒಗ್ಗೂಡಿಸಿ ಶಾಂತಿಸ್ಥಾಪನೆ ಮಾಡಿ ದೇಶ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ದಲಿತರಿಗಿಂತ ಮುಸ್ಲಿಮರ ಸ್ಥಿತಿಗತಿ ಕ್ಷೀಣಿಸಿದೆ. ತಲಾಖ್ ವಿಷಯವನ್ನು ಚುನಾವಣೆಯ ವಿಷಯಗಳನ್ನಾಗಿ ಯಾರು ಪ್ರಸ್ತಾಪಿಸಬಾರದು. ಕುರಾನ್‌ನಲ್ಲಿರುವುದು ಯಾರು ಬದಲಾಯಿಸುವುದು ಸಾಧ್ಯವಿಲ್ಲ. ಮುಸ್ಲಿಂ ಬಾಂಧವರಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯೊಂದಿಗೆ ಕೇಂದ್ರದ ಕಾನೂನು ಆಯೋಗವು ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರ ಹಿಂಪಡೆಯಬೇಕು. ತಲಾಖ್ ಮತ್ತು ಬಹುಪತ್ನಿತ್ವಗಳಿಗೆ ಇಸ್ಲಾಂನಲ್ಲಿ ಅವಕಾಶವಿದೆ ಎಂದ ಮಾತ್ರಕ್ಕೆ ಅದು ಪ್ರೋತ್ಸಾಹದಾಯಕವಲ್ಲ. ಹಲವು ನಿಯಂತ್ರಣ ಶರತ್ತುಗಳಿಗೆ ಅವು ಬದ್ಧವಾಗಿವೆ. ಅಜ್ಞಾನಿಯಿಂದಲೂ ಪೂರ್ವಗ್ರಹಿಕೆ ಯಿಂದಲೋ ಇವುಗಳನ್ನು ಸ್ತ್ರೀ ಶೋಷಣೆ ಎಂಬುದಾಗಿ ಬಿಂಬಿಸಿ ಮುಸ್ಲಿಂ ವೈಯುಕ್ತಿಕ ಕಾನೂನುಗಳನ್ನು ರದ್ದುಪಡಿಸಲು ಹೋರಾಡುವುದು ಅತ್ಯಂತ ಅಪಾಯಕಾರಿ ವಿಷಯ ವೆಂದು ಹೇಳಿದರು.

ನಸೀರ್ ಅಹ್ಮದ್, ಮೌಲಾನ ಇಬ್ರಾಹಿಂ ಸಖಾಫಿ, ಸಯ್ಯಿದ್ ಖಾಲಿದ್, ಸಯ್ಯದ್ ಮುಖ್ತಾರ್ ಅಹ್ಮದ್ ರಝ್ವಿ, ಅಬೂಬಕ್ಕರ್ ಸಿದ್ದಿಕ್ ಅಮಾನಿ, ಪಾಲಿಕೆ ಸದಸ್ಯ ಚಮನ್ ಸಾಬ್, ಫೈ ಯಾಜ್ ಅಹ್ಮದ್, ಸುಬಾನ್ ಸಾಬ್ ಇದ್ದರು.