ಕೊಲೆ ಆರೋಪದಡಿ ಜೈಲು ಸೇರಿದ್ದ ರೌಡಿ ಶೀಟರ್ ಇಲಿಯಾಸ್ ಮೂರು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದು. ಈತನನ್ನು ಮಾರಾಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ.
ಮಂಗಳೂರು: ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ರೌಡಿ ಶೀಟರ್ ಇಲಿಯಾಸ್‌ನನ್ನು ಬೆಳ್ಳಂ ಬೆಳಗ್ಗೆ ಚೂಪಾದ ಮಾರಾಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದು, ಆ ಮೂಲಕ ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ.
ನಗರದ ಹೊರವಲಯದ ಜಪ್ಪಿನ ಮೊಗಲು ಎಂಬಲ್ಲಿ ಈ ಘಟನೆ ನೆಡಿದ್ದು, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಜುಬೈರ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಇಲಿಯಾಸ್, ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಘಟನೆ ನಡೆದಿದ್ದು ಎಲ್ಲಿ?
ಜೆಪ್ಪು ಕುಡ್ಪಾಡಿಯ ಫ್ಲಾಟ್‌ನಲ್ಲಿದ್ದ ಇಲಿಯಾಸ್ ಮನೆ ಬೆಲ್ ಮಾಡಿದ ದುಷ್ಕರ್ಮಿಗಳು, ಬಾಗಿಲು ತೆಗೆದಾಗ ಈ ಕೃತ್ಯವೆಸಗಿದ್ದಾರೆ. ಎರಡು ತಂಡಗಳ ನಡುವಿನ ದ್ವೇಷದಿಂದ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಸಫ್ವಾನ್ ಗ್ಯಾಂಗ್ ಮತ್ತು ಇಲಿಯಾಸ್ ಗ್ಯಾಂಗ್ ಮಧ್ಯೆ ದ್ವೇಷವಿತ್ತು. ಅದೇ ದ್ವೇಷದ ಮೇಲೆ ಮನೆಗೆ ನುಗ್ಗಿ ಹತ್ಯೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಮಿಫ್ತಾ ಗ್ಯಾಲೋರೆ ಫ್ಲಾಟ್‌ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಈ ಕೊಲೆ ನಡೆದಿದೆ.
ಇಲಿಯಾಸ್ ಯಾರು?
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹಾಗೂ ಬಶೀರ್ ಹತ್ಯೆ ವೇಳೆ, ಈ ರೌಡಿ ಶೀಟರ್ ಇಲಿಯಾಸ್‌ನೊಂದಿಗೆ ಸಚಿವ ಯು.ಟಿ.ಖಾದರ್ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ರೌಡಿ ಶೀಟರ್'ನೊಂದಿಗೆ ರಾಜ್ಯ ಸಚಿವ ಎಂದು ಟ್ರಾಲ್ ಮಾಡಲಾಗಿತ್ತು. ಇದೀಗ ಇದೇ ಇಲಿಯಾಸ್ ವೈರಿ ಗುಂಪಿಗೆ ಕೊಲೆಯಾಗಿದ್ದಾನೆಂದು ಹೇಳಲಾಗುತ್ತಿದೆ.
