ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ್ದಲ್ಲದೆ, ಪಿಸ್ತೂಲು ತೋರಿಸಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ 14 ಜನ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಜತೆಗೆ ಶಿವಮೊಗ್ಗ ಹಾಗೂ ಸಾಗರದ ವಿವಿಧೆಡೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 34 ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಶಿವಮೊಗ್ಗ (ಅ.27): ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ್ದಲ್ಲದೆ, ಪಿಸ್ತೂಲು ತೋರಿಸಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ 14 ಜನ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಜತೆಗೆ ಶಿವಮೊಗ್ಗ ಹಾಗೂ ಸಾಗರದ ವಿವಿಧೆಡೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 34 ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಪ್ರತ್ಯೇಕ ತಂಡವಾಗಿ ವಿವಿಧ ರಾಜ್ಯಗಳಲ್ಲಿ ಚದುರಿ ಹೋಗಿದ್ದ ಕೊಲೆ ಯತ್ನ ಪ್ರಕರಣಗಳದ ಆರೋಪಿಗಳನ್ನು ಬಂಧಿಸಲು ಎಸ್ಪಿ ಅಭಿನವ್ ಖರೆ ಅವರು ನೇಮಿಸಿದ್ದ ತನಿಖಾ ತಂಡಗಳು ಸಾವಿರಾರು ಕಿ.ಮೀ.ಪ್ರಯಾಣ ಮಾಡಿವೆ. ಯಾವುದೇ ಹೆಚ್ಚಿನ ಸುಳಿವು ಇಲ್ಲದೆ ಮೊಬೈಲ್ ಕರೆ ಹಾಗೂ ಅಸ್ಪಷ್ಟ ಫೋಟೊ ಇಟ್ಟುಕೊಂಡು ಮುಂಬೈ, ಮಂಗಳೂರು, ವಿಜಯುಪುರ ಮತ್ತಿತರ ಕಡೆ ತಿರುಗಿ ಕೊನೆಗೂ ಬಂಧಿಸಿವೆ.
ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರಕರಣ ಭೇದಿಸಿ ಎಲ್ಲ ಆರೋಪಿಗಳನ್ನು ತುಂಗಾ ನಗರ ಹಾಗೂ ದೊಡ್ಡಪೇಟೆ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಡಿಸಿಬಿ ಇನ್‌ಸ್ಪೆಕ್ಟರ್ ಕೆ. ಕುಮಾರ್, ಡಿಎಸ್‌ಬಿ ಇನ್‌ಸ್ಪೆಕ್ಟರ್ ಮುತ್ತಣ್ಣ ಗೌಡ ಹಾಗೂ ದೊಡ್ಡಪೇಟೆ ಪಿಎಸೈ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದ ಮೂರು ಪ್ರತ್ಯೇಕ ತಂಡ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸಾವಿರಾರು ಕಿ.ಮೀ.ಸಂಚರಿಸಿ ಆರೋಪಿಗಳನ್ನು ಬಂಧಿಸಿವೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ರಿವಾಲ್ವರ್, ಒಂದು ಜೀವಂತ ಗುಂಡು, ಮೂರು ಬೈಕ್, ಮೊಬೈಲ್, ಲಾಂಗ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಲ್ಲಿ ಅನೇಕರು ಈ ಹಿಂದೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಇನ್ನು ಕೆಲವರು ಇತ್ತೀಗಷ್ಟೇ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ನಸ್ರುವಿನ ಕೊಲೆಗೆ ಪ್ರತೀಕಾರ ತೀರಿಸಿದರೆ ರೌಡಿಗಳಾಗಿ ಬೆಳೆಯಬಹುದು ಎಂದು ಭಾವಿಸಿ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ರಿವಾಲ್ವರ್ ಮೂಲಕ ಒಂದು ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದರು. ಕೈಯಲ್ಲಿ ಹಣವಿಲ್ಲದೇ ಊರು ಬಿಟ್ಟಿದ್ದ ಇವರು ದಿನದ ಖರ್ಚು ನಿರ್ವಹಣೆಗಾಗಿ ಮೊಬೈಲ್ ಮಾರಿದ್ದರು.
ಎಸ್ಪಿ ಅಭಿನವ್ ಖರೆ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದರು.
ಘಟನೆ ಹಿನ್ನೆಲೆ
ಸಾಗರ ರಸ್ತೆಯ ಆಯನೂರು ಗೇಟ್ ಬಳಿ ಅ.13 ರಂದು ಮಧ್ಯಾಹ್ನ 3.15 ಕ್ಕೆ ಇಮ್ರಾನ್ ಎಂಬುವರ ಬೈಕ್‌ಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿತ್ತು. ಅದೇ ದಿನ ಸಂಜೆ 5.15 ರ ಸುಮಾರಿಗೆ ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಆರ್‌ಎಂಎಲ್ ನಗರದ ಮುಖ್ಯ ರಸ್ತೆಯಲ್ಲಿ ಬಚ್ಚಾ ಹಾಗೂ ಇತರರು ಮಾರಕಾಸ್ತ್ರಗಳಿಂದ ಶಾಹಿದ್ ಪಾಶ ಎಂಬುವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಅ.14 ರಂದು ಮೊಹಿನ್ ಮತ್ತು ಇತರರು ನ್ಯೂ ಮಂಡ್ಲಿ ವಾಸಿ ದಾಡಿ ಬಶೀರ್ ಎಂಬುವರ ಮನೆಗೆ ನುಗ್ಗಿ ರಿವಾಲ್ವರ್ ತೆಗೆದು ಅವರ ಹಣೆಗೆ ಗುರಿಯಿಟ್ಟು ಕೊಲೆಗೆ ಯತ್ನಿಸಿ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದರು. ಈ ಪ್ರಕರಣಗಳು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ತನಿಖೆಯ ನಂತರ ಈ ಎಲ್ಲಾ ಕೃತ್ಯಗಳಿಗೆ ಕಾರಣರಾದ ಆರೋಪಿಗಳಾದ ರೌಡಿ ಅಜರ್, ಹಯಾತ್, ಮೊಹಿದ್ದೀನ್ ಹಾಗೂ ಇತರೆ 10 ರಿಂದ 15 ಜನಗಳು ಮೃತ ರೌಡಿ ನಸ್ರುವಿನ ಸಂಬಂಧಿಕರಾಗಿದ್ದು ನಸ್ರುವಿನ ಕೊಲೆಗೆ ಕಾರಣನಾದ ದಾಡಿ ಬಷೀರ್‌ನನ್ನು ಮುಗಿಸುವ ಉದ್ದೇಶ ಹೊಂದಿದ್ದು ಗೊತ್ತಾಗಿತ್ತು ಎಂದು ಎಸ್ಪಿ ಅಭಿನವ್ ಖರೆ ಹೇಳಿದರು. ಬಚ್ಚೆ ಗ್ಯಾಂಗ್ ಹಾಗೂ ಕೀಲಿ ಇಮ್ರಾನ್ ಗ್ಯಾಂಗ್‌ಗಳ ನಡುವೆ ವೈಷಮ್ಯ ಇದ್ದು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಗುಂಪು ರಚಿಸಿಕೊಂಡು ಒಳ ಸಂಚು ರೂಪಿಸಿ ಈ ಎಲ್ಲ ಕೃತ್ಯಗಳನ್ನು ನಡೆಸಿದ್ದಲ್ಲದೆ ಘಟನೆ ನಡೆದ ದಿನವೇ ನಾಪತ್ತೆಯಾಗಿತ್ತು ಎಂದರು.
ಬಂಧನ
ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಡಿಸಿಬಿ ಇನ್‌ಸ್ಪೆಕ್ಟರ್ ಕೆ.ಕುಮಾರ್ ನೇತೃತ್ವದ ತಂಡವು ಮೊಹಿದ್ದೀನ್, ಇರ್ಫಾನ್, ಅಯಾತ್, ಮೃತ ನಸ್ರುವಿನ ಮಗ ಬಚ್ಚಾ, ವಸೀವುಲ್ಲಾ, ಜಾಫರ್ ಮತ್ತು ನಿಯಾಜ್‌ನನ್ನು ಬೆಳಗಾವಿ, ಮುಂಬೈ ಹಾಗೂ ಮಂಗಳೂರಿನಲ್ಲಿ ಪತ್ತೆಹಚ್ಚಿ ಅಂತಿಮವಾಗಿ ಹೊಸಕೋಟೆ ತಾಲೂಕು ಬೈಲು ನರಸಪುರದ ದರ್ಗಾ ಬಳಿ ಗುರುವಾರ ಬಂಧಿಸಿದೆ.
ಡಿಎಸ್‌ಬಿ ಇನ್‌ಸ್ಪೆಕ್ಟರ್ ಮುತ್ತಣ್ಣ ನೇತೃತ್ವದ ತಂಡ ಆರೋಪಿಗಳಾದ ಅಜರ್, ಯಾಸೀನ್, ನಜೀವುಲ್ಲಾ, ಇಮ್ದಾದ್ ಹಾಗೂ ಸಲ್ಮಾನ್‌ನನ್ನು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಗುರುವಾರ ಬಂಧಿಸಿದೆ. ಹಾಗೆಯೇ ದೊಡ್ಡಪೇಟೆ ಪಿಎಸೈ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡ ಆರೋಪಿಗಳಾದ ಹಾಜಿಮಾ, ಜೇಟ್ಲಿ ಮತ್ತು ಅನ್ಸರ್‌ನನ್ನು ಬಂಧಿಸಿದೆ ಎಂದು ತಿಳಿಸಿದರು.
ಆರೋಪಿ ಮಹಿಳೆ ನಾಜೀಮಾಳನ್ನು ಈಗಾಗಲೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಳಪಡಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
ರೌಡಿಗಳ ಬಂಧನ
ಕಳೆದೆರಡು ತಿಂಗಳಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ ೩೪ ಮಂದಿಯನ್ನು ಬಂಧಿಸುವ ಮೂಲಕ ಜಿಲ್ಲಾ ಪೊಲೀಸ್ ಎಚ್ಚರಿಕೆ ಸಂದೇಶ ಕಳುಹಿಸಿದೆ.
ಶಿವಮೊಗ್ಗದ ಕೋಟೆ, ವಿನೋಬ ನಗರ, ಜಯನಗರ, ದೊಡ್ಡಪೇಟೆ, ಸಾಗರ ಪೇಟೆ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ೩೪ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ಎಸ್ಪಿ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಎರಡು ತಿಂಗಳಲ್ಲಿ ರೌಡಿಗಳ ವಿರುದ್ಧ ಒಟ್ಟು 40 ಪ್ರಕರಣಗಳನ್ನು ಕಲಂ 107 ಮತ್ತು 110 ಸಿಆರ್‌ಪಿಸಿ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ದಾಖಲಿಸಲಾಗಿದೆ. ಅಲ್ಲದೆ ರೌಡಿ ಸಾದಿಕ್‌ನನ್ನು ಗೂಂಡಾ ಕಾಯಿದೆಯಡಿ ಬಂಧಿಸಿ ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇದಲ್ಲದೆ ಇನ್ನೂ ಕೆಲವರನ್ನು ಗುರುತಿಸಲಾಗಿದ್ದು ಸದ್ಯದಲ್ಲೇ ಗೂಂಡಾ ಕಾಯಿದೆಯಡಿ ಕ್ರಮ ಜರುಗಿಸಲಾಗುವುದು. ಹಳೆಯ ರೌಡಿಗಳ ಮೇಲೆ ನಿಗಾ ಇರಿಸುವುದರ ಜತೆಗೆ ಹೊಸದಾಗಿ ರೌಡಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವವರ ವಿರುದ್ಧ ರೌಡಿ ಹಾಳೆ ತೆರೆಯಲಾಗುವುದು ಎಂದರು.
