ಹರಪನಹಳ್ಳಿ (ನ.09):  ತುಂಗಭದ್ರಾ ನದಿಯಲ್ಲಿ ದೋಣಿ ಮೂಲಕ ಅಕ್ರಮ ಮರಳು ಎತ್ತುತ್ತಿದ್ದ ನಾಲ್ವರು ಬಿಹಾರ ರಾಜ್ಯದ ವ್ಯಕ್ತಿಗಳನ್ನು ಹಲುವಾಗಲು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಹಸೀಲ್ದಾರ್ ಎದುರು ಹಾಜರು ಪಡಿಸಿದಾಗ ತಾಲೂಕು ದಂಡಾಧಿಕಾರಿಗಳೂ ಆದಂತಹ ತಹಸೀಲ್ದಾರ್ ಗುರುಬಸವರಾಜ ಷರತ್ತುಗೊಳಪಟ್ಟು ಜಾಮೀನು ನೀಡಿದ್ದು, ಅವರ ಚಲನ ವಲನ ಗಮನಿಸಿ ನಾಲ್ಕು ಜನ ಆರೋಪಿತರನ್ನು ಪುನಃ ನ. 16 ರಂದು ತಮ್ಮ ಎದುರು ಹಾಜರು ಪಡಿಸಲು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ತಹಸೀಲ್ದಾರ್, ಬಿಹಾರ ರಾಜ್ಯದಿಂದ 60 ಜನರು ತಾಲೂಕಿನ ತುಂಗಭದ್ರಾ ನದಿ ತೀರದ ಗರ್ಭಗುಡಿ ಗ್ರಾಮಕ್ಕೆ ಆಗಮಿಸಿದ್ದರು. ಆಶ್ರಯ ಮನೆಗಳಲ್ಲಿ ಬಾಡಿಗೆ ಪ್ರಕಾರ ವಾಸವಿರುವ ಬಿಹಾರಿಗಳು, ಹಗಲು ಹೊತ್ತು ಮನೆಯಲ್ಲಿ ಮಲಗಿಕೊಳ್ಳುತ್ತಿದ್ದರು. ರಾತ್ರಿ 7 ಗಂಟೆ ನಂತರ ಬೋಟ್ ಮೂಲಕ ನದಿಗೆ ಇಳಿದು ನೀರಿನಲ್ಲಿ ಮುಳುಗಿ ಚೀಲದಲ್ಲಿ ಅಕ್ರಮ ಮರಳು ಎತ್ತಿ ದಡಕ್ಕೆ ತರುತ್ತಿದ್ದರು. ನಂತರ ಮರಳನ್ನು ಸ್ಥಳೀಯರಿಗೆ ನೀಡಿ ತಮ್ಮ ಕೂಲಿ ಪಡೆಯುತ್ತಿದ್ದರು. ಒಮ್ಮೆ ಭೇಟಿ ನೀಡಿ ಎಚ್ಚರಿಕೆ ಕೊಟ್ಟ ನಂತರ 30 ಜನರಲ್ಲಿ 30 ಜನರು ತಮ್ಮ ರಾಜ್ಯಕ್ಕೆ ತೆರಳಿದ್ದಾರೆ. ಎರಡನೇ ಬಾರಿ ಭೇಟಿ ನೀಡಿದಾಗ 20 ಜನರು ಇಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿಸಿದರು.

ಈಚೆಗೆ ತಹಸೀಲ್ದಾರ್‌ರು ಹಲುವಾಗಲು ಪೊಲೀಸ್ ಠಾಣೆಗೆ ಭೇಟಿ ನೀಡಿ ಇವರ ಕುರಿತು ತನಿಖೆ ನಡೆಸಲು ದೂರು ನೀಡಿದಾಗ ನ. 09 ರಂದು ಪೊಲೀಸರು ನಾಲ್ಕು ಜನ ಬಿಹಾರಿಗಳನ್ನು ಬಂಧಿಸಿ ತಾಲೂಕು ದಂಡಾಧಿಕಾರಿಗಳ ಎದುರಿಗೆ ಹಾಜರು ಪಡಿಸಿದ್ದಾರೆ.