Asianet Suvarna News Asianet Suvarna News

ಹಣ ಪಾವತಿಸಲು ಬ್ಯಾಂಕಿಗೆ ಬಂದ ಮಹಿಳೆಯ 64 ಸಾವಿರ ಪಿಕ್ ಪಾಕೆಟ್ ಮಾಡಿದ ಖದೀಮರು

ಬಹುತೇಕ ಬ್ಯಾಂಕುಗಳ ಎದುರು ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ. ಆದರೂ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಹಣ ಪಾವತಿಗೆ ಬಂದಿದ್ದ ಮಹಿಳೆಯೊಬ್ಬರ ರೂ.64 ಸಾವಿರ ಪಿಕ್ ಪಾಕೆಟ್ ಮಾಡಿದ ಘಟನೆ ನಡೆದಿದೆ.

Pick Pocket in Bank
  • Facebook
  • Twitter
  • Whatsapp

ಶಿವಮೊಗ್ಗ (ನ.12): ದೊಡ್ಡ ನೋಟುಗಳು ಅಮಾನ್ಯವಾದ ನಾಲ್ಕು ದಿನಗಳ ನಂತರವೂ ಬ್ಯಾಂಕುಗಳ ಎದುರು ಜನರ ಸಾಲು ಕರಗಿಲ್ಲ. ಎಟಿಎಂಗಳು ತೆರೆಯದ ಕಾರಣ ಬ್ಯಾಂಕುಗಳ ಎದುರು ಶನಿವಾರವೂ ದೊಡ್ಡದೊಡ್ಡ ಸಾಲುಗಳು ಕಂಡುಬಂದವು. ಗ್ರಾಮಾಂತರ ಪ್ರದೇಶದಲ್ಲಿಯೂ ನೂಕುನುಗ್ಗಲು ಇತ್ತು. ಎಲ್ಲೆಡೆ ಜನರು ಚಿಲ್ಲರೆಗಾಗಿ ಪರದಾಡುತ್ತಿದ್ದುದು ಕಂಡುಬಂತು.

ಬಹುತೇಕ ಬ್ಯಾಂಕುಗಳ ಎದುರು ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ. ಆದರೂ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಹಣ ಪಾವತಿಗೆ ಬಂದಿದ್ದ ಮಹಿಳೆಯೊಬ್ಬರ ರೂ.64 ಸಾವಿರ ಪಿಕ್ ಪಾಕೆಟ್ ಮಾಡಿದ ಘಟನೆ ನಡೆದಿದೆ.

ಶುಕ್ರವಾರದಿಂದ ಹಲವರಿಗೆ ಹೊಸ ರೂ.2000 ಮೌಲ್ಯದ ನೋಟುಗಳು ಸಿಕ್ಕಿವೆ. ರೂ.500 ಮೌಲ್ಯದ ನೋಟುಗಳು ಇನ್ನೂ ಬ್ಯಾಂಕುಗಳಿಗೆ ತಲುಪಿಲ್ಲ.

ಆದರೆ, ಅಮಾನ್ಯವಾಗಿರುವ ನೋಟುಗಳು ಇನ್ನೂ ಚಾಲ್ತಿಯಲ್ಲಿವೆ. ಚಿಲ್ಲರೆ ಸಿಗದ ಕಾರಣ ಅಂಗಡಿಗಳಲ್ಲಿ ಇದೇ ನೋಟುಗಳನ್ನು ಪಡೆಯುತ್ತಿದ್ದಾರೆ. ‘ಕನ್ನಡಪ್ರಭ’ ಸೋಮಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದಾಗ ಅಂಗಡಿ ಚಂದ್ರಪ್ಪ ಅವರು, ನಾವು ಯಾರಿಂದ ಮಾಲು ಖರೀದಿಸುತ್ತೇವೋ ಅವರಿಗೇ ಈ ಹಣ ಕೊಡುತ್ತೇವೆ. ಕೆಲವರು ಹಳೇ ನೋಡು ಪಡೆಯುತ್ತಿಲ್ಲ. ಆದರೆ ಇದೇ ನೋಟುಗಳನ್ನು ಪಡೆದು ಸಾಮಾನು ನೀಡುವವರು ಇದ್ದಾರೆ ಎನ್ನುತ್ತಾರೆ.

ಹೊಳಲೂರು ಗ್ರಾಮದ ಕೆನರಾ ಬ್ಯಾಂಕ್ ಎದುರು ಉದ್ದನೆಯ ಸಾಲು ಇದ್ದು, ನೂರಾರು ನಾಗರಿಕರು ಹಣ ಬದಲಾವಣೆಗಾಗಿ ಬಂದಿದ್ದರು. ಸಾಲಿನಲ್ಲಿ ನಿಂತವರಿಗೆ ಬಿಸಿಲಿದ್ದ ಕಾರಣ ಬ್ಯಾಂಕಿನವರೇ ಕಟ್ಟಡದ ಎದುರು ಶಾಮಿಯಾನ ಹಾಕಿಸಿದ್ದರು.

ಮುಂಗಡ ಸಂಬಳ:

ಶಿವಮೊಗ್ಗದ ಕೆಲ ಶಿಕ್ಷಣ ಸಂಸ್ಥೆಗಳು ಸಿಬ್ಬಂದಿಗೆ 10 ತಿಂಗಳ ಸಂಬಳ ಮುಂಗಡವಾಗಿ ನೀಡಿರುವುದು ಬೆಳಕಿಗೆ ಬಂದಿದೆ. ಸುಮಾರು ಒಂದೂವರೆ ಲಕ್ಷ ರೂ.ಗಳಷ್ಟು ಹಣ ಅವರಿಗೆ ನೀಡಿದ್ದಾರೆ. ಸಿಬ್ಬಂದಿಯೂ ಹಣ ಸಿಕ್ಕ ಖುಷಿಯಲ್ಲಿದ್ದಾರೆ. ತಮ್ಮ ಮನೆ ಕೆಲಸದವರ ಖಾತೆಗೆ ಹಣ ಹಾಕಿ ಮತ್ತೆ ವಾಪಸು ಪಡೆಯುವ ಪ್ರಯತ್ನವನ್ನೂ ಸಹ ಹಲವರು ನಡೆಸಿದ್ದಾರೆ.

ಖಾತೆದಾರರಿಗೆ ಮಾತ್ರ:

ಕೆಲ ಬ್ಯಾಂಕುಗಳು ಖಾತೆದಾರರಿಗೆ ಮಾತ್ರ ಹಣ ಬದಲಾವಣೆ ಮಾಡಿ ಕೊಡುತ್ತಿರುವುದು ಕಂಡುಬಂದಿದೆ.

ಗಾರ್ಡನ್ ಏರಿಯಾದ ಬ್ಯಾಂಕೊಂದಕ್ಕೆ ಬಂದಿದ್ದ ಶರವಣ ಎಂಬುವರು, ನಾನು ಬೇರೆ ಊರಿನಿಂದ ಬಂದಿದ್ದೇನೆ. ನನ್ನ ಖಾತೆ ಶಿವಮೊಗ್ಗದ ಯಾವ ಬ್ಯಾಂಕಿನಲ್ಲಿಯೂ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದರೂ ಸಹ ‘ಈ’ ಬ್ಯಾಂಕಿನವರು ಬದಲಾವಣೆ ಮಾಡಿಕೊಡಲು ಒಪ್ಪುತ್ತಿಲ್ಲ. ಮೂರು ಬ್ಯಾಂಕುಗಳನ್ನು ಸುತ್ತಿ ಇಲ್ಲಿಗೆ ಬಂದಿದ್ದೇನೆ. ಈಗಾಗಲೇ ಸಂಜೆಯಾಗುತ್ತಿದೆ. ಇವತ್ತಿನ ಖರ್ಚಿಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಭಾನುವಾರವೂ ಬ್ಯಾಂಕ್ ತೆರೆದಿರುತ್ತದೆ. ರಜೆಯ ಕಾರಣ ಭಾನುವಾರ ಎಲ್ಲೆಡೆ ನೂಕುನುಗ್ಗಲು ಆಗುವ ಸಂಭವವಿದೆ. ಏನು ಮಾಡಲು ಆಗುತ್ತಿಲ್ಲ ಎಂದರು. ಬಹುತೇಕ ಇದೇ ಎಲ್ಲರ ಗೊಂದಲವೂ ಇದೇ ಆಗಿತ್ತು.

Follow Us:
Download App:
  • android
  • ios