ಭದ್ರಾವತಿ (ಅ.12):  ನಗರದ ಬಿ.ಎಚ್‌. ರಸ್ತೆ ಅಂಬೇಡ್ಕರ್‌ ವೃತ್ತದ ಅಂಡರ್‌ ಬ್ರಿಡ್ಜ್‌ ಬಳಿ ಇರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಪ್ರತಿಮೆ ಬಳಿ ಚಪ್ಪಲಿ ಹಾಕಿ ಅವಮಾನಿಸಿರುವ ಘಟನೆ ಬುಧವಾರ ನಡೆದಿದೆ. ಬೆಳಗ್ಗೆ ಎಂದಿನಂತೆ ಪೌರಕಾರ್ಮಿಕರು ಅಂಬೇಡ್ಕರ್‌ ಪ್ರತಿಮೆ ಸ್ವಚ್ಚಗೊಳಿಸಿದ್ದು, ಇದಾದ ನಂತರ ಕಾರಿನಲ್ಲಿ ಬಂದ ಕಿಡಿಗೇಡಿಗಳು ಅಂಬೇಡ್ಕರ್‌ ಪ್ರತಿಮೆಗೆ ಚಪ್ಪಲಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

ಈ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ನೇತೃತ್ವದಲ್ಲಿ ಪ್ರಜಾ ಸಂಘರ್ಷ ವೇದಿಕೆ, ಅಮ್‌ ಆದ್ಮಿ ಪಾರ್ಟಿ, ಜನಶಕ್ತಿ, ಕೋಮು ಸೌಹಾರ್ದ ವೇದಿಕೆ, ಆದಿ ದ್ರಾವಿಡ ತಮಿಳು ಸಂಘಟನೆ ಸೇರಿ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅಂಬೇಡ್ಕರ್‌ ಪ್ರತಿಮೆಗೆ ಅವಮಾನಗೊಳಿಸಿರುವವರನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಂಬೇಡ್ಕರ್‌ ಪ್ರತಿಮೆಗೆ ಸಿ.ಸಿ ಕ್ಯಾಮರ ಅಳವಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿನ್ಸೆಂಟ್‌ ಶಾಂತಕುಮಾರ್‌, ತಹಸೀಲ್ದಾರ್‌ ಎಂ.ಆರ್‌. ನಾಗರಾಜ್‌, ಪೊಲೀಸ್‌ ಉಪ ಅಧೀಕ್ಷಕ ಉದೇಶ್‌ ಸುಮಾರು 3 ಗಂಟೆಗೂ ಹೆಚ್ಚು ಸಮಯ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವುದಾಗಿ ಹಾಗೂ ಸಿ.ಸಿ ಕ್ಯಾಮರ ಅಳವಡಿಸುವುದಾಗಿ ಮತ್ತು ಅಂಬೇಡ್ಕರ್‌ ಪ್ರತಿಮೆ ಬಳಿ ಕಾಯಂ ಪೊಲೀಸ್‌ ಪೇದೆ ನೇಮಿಸುವ ಭರವಸೆ ನೀಡಿದರು.

ಪ್ರತಿಭಟನೆಯಿಂದಾಗಿ ಸುಮಾರು 3 ಗಂಟೆಗೂ ಹೆಚ್ಚು ಸಮಯ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರು ಸಂಚಾರ ವ್ಯವಸ್ಥೆ ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ್‌, ವಿವಿಧ ಸಂಘಟನೆಗಳ ಪ್ರಮುಖರಾದ ಚಿನ್ನಯ್ಯ, ಈಶ್ವರಪ್ಪ, ಪಳನಿರಾಜ್‌, ಮಣಿ, ಕೆ. ಕುಪ್ಪಸ್ವಾಮಿ, ಪೇಪರ್‌ ಸುರೇಶ್‌, ಎಂ. ಶ್ರೀನಿವಾಸನ್‌, ಮುನೀರ್‌ ಅಹಮ್ಮದ್‌, ಎಎಪಿ ರವಿಕುಮಾರ್‌, ಪರಮೇಶ್ವರಚಾರ್‌, ಚಂದ್ರಶೇಖರ್‌, ಉಜ್ಜನಿಪುರ ರಾಜು, ಪರಮೇಶ್ವರಚಾರ್‌, ಕಾಣಿಕ್‌ರಾಜ್‌, ಬಾಲಕೃಷ್ಣ, ಎಚ್‌.ಎಂ. ಖಾದ್ರಿ, ನಗರಸಭಾ ಮಾಜಿ ಸದಸ್ಯ ಚನ್ನಪ್ಪ ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.