ಇಲ್ಲಿ ದರೋಡೆಕೋರರ ಆತಂಕ ಒಂದೆಡೆಯಾದರೆ ಮತ್ತೊಂದೆಡೆ ಅಪರಿಚಿತ ವ್ಯಕ್ತಿಗಳು ಗ್ರಾಮಾಂತರ ಪ್ರದೇಶದಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೊಡಗು (ನ.25): ಇಲ್ಲಿ ದರೋಡೆಕೋರರ ಆತಂಕ ಒಂದೆಡೆಯಾದರೆ ಮತ್ತೊಂದೆಡೆ ಅಪರಿಚಿತ ವ್ಯಕ್ತಿಗಳು ಗ್ರಾಮಾಂತರ ಪ್ರದೇಶದಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.
ಮಡಿಕೇರಿ ತಾಲ್ಲೂಕು ಚೆಟ್ಟಿಮಾನಿ, ತಣ್ಣಿ ಮಾನಿ, ಮತ್ತು ಕುಂದಚೇರಿ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಬಂದೂಕುಗಳನ್ನು ಹಿಡಿದು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದಾರೆ ಎನ್ನುವ ಗುಮಾನಿ ಹಬ್ಬಿದೆ. ಇದರಿಂದ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಮನೆಯಿಂದ ಹೊರ ಬರುವುದಕ್ಕೂ ಹೆದರುತ್ತಿದ್ದಾರೆ.
ಎರಡು ದಿನದ ಹಿಂದೆಯಷ್ಟೇ ಭಾಗಮಂಡಲ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಲವೀನ್ ಎಂಬಾತ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿದ್ದಾರೆ. ಆ ಕ್ಷಣಕ್ಕೆ ತನ್ನ ಶಾಲಾ ಬ್ಯಾಗ್ ಅನ್ನು ಬಿಟ್ಟು ತಪ್ಪಿಸಿಕೊಂಡ ಲವೀನ್ ಓಡಿಹೋಗಿ ಸಂಬಂಧಿಕರ ಮನೆಯ ಆಶ್ರಯ ಪಡೆದಿದ್ದಾನೆ. ಇನ್ನು ಕುಂದಚೇರಿ ಬಳಿ ಒಂಟಿ ಮನಗೆ ಕೆಲವು ಮುಸುಕುದಾರಿಗಳು ಭೇಟಿ ನೀಡಿದ್ದು ಮಹಿಳೆ ಕಿರುಚಿದ್ದರಿಂದ ಈ ಅಪರಿಚಿತ ವ್ಯಕ್ತಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಭಾಗಮಂಡಲದ ಕೆಲವು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಇರುವುದರಿಂದ ನಕ್ಸಲ್ಗಳು ಬಂದಿರಬಹುದೆಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಲವೀನ್ ಪ್ರಕಾರ ತನ್ನನ್ನು ಅಡ್ಡಗಟ್ಟಿದವರು ಪಂಚೆ ಮತ್ತು ಶರ್ಟ್ ಧರಿಸಿದ್ದರು. ಕೈಯಲ್ಲಿ ಹಗ್ಗ ಮತ್ತು ಒಂದು ಬಂದೂಕು ಇತ್ತು ಎಂದು ಪೋಲಿಸರಿಗೆ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಕೊಡಗು ಜಿಲ್ಲಾ ಪೋಲಿಸರು ಸಹ ಅಲರ್ಟ್ ಆಗಿದ್ದು, ಎಎನ್ಎಫ್ ತಂಡದೊಂದಿಗೆ ಕೂಂಬಿಂಗ್ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
