- ನೇರಳೆ ಮಾರ್ಗದಲ್ಲಿನ್ನು 3.5 ನಿಮಿಷಕ್ಕೊಂದು ರೈಲು ಓಡಾಡಲಿದೆ.- ಹಸಿರು ಮಾರ್ಗದಲ್ಲಿ ಮೂರು ಟ್ರಿಪ್ ಹೆಚ್ಚಳ, ಆರು ನಿಮಿಷಕ್ಕೊಂದು ಟ್ರೈನ್.
ಬೆಂಗಳೂರು: ಜನದಟ್ಟಣೆ ಅವಧಿಯಲ್ಲಿ ಪ್ರಯಾಣಿಕರು ಆರಾಮವಾಗಿ ಸಂಚರಿಸಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ಹಸಿರು ಹಾಗೂ ನೇರಳೆ ಮಾರ್ಗಗಳಲ್ಲಿ ರೈಲು ಸಂಚಾರದ ಟ್ರಿಪ್‌ಗಳ ಸಂಖ್ಯೆ ಹೆಚ್ಚಳ ಮಾಡಿದೆ.
ಜನವರಿ 2ರಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದ್ದು, ಬೈಯ್ಯಪ್ಪನಹಳ್ಳಿ-ಮೈಸೂರು ಮಾರ್ಗದಲ್ಲಿ (ನೇರಳೆ) 10 ಟ್ರಿಪ್‌ಗಳನ್ನು ಹೆಚ್ಚಳ ಮಾಡಿದ್ದು, ಪ್ರತಿ 3.5 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ (ಹಸಿರು) 3 ಟ್ರಿಪ್‌ಗಳನ್ನು ಹೆಚ್ಚಿಸಿದ್ದು, ಪ್ರತಿ ೬ ನಿಮಿಷಕ್ಕೊಂದು ರೈಲುಗಳು ಕಾರ್ಯನಿರ್ವಹಿಸಲಿವೆ. ಕಚೇರಿ ವೇಳೆಯಲ್ಲಿ ನಾಗರಿಕರು
ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಬೋಗಿಗಳಲ್ಲಿ ನೂಕು ನುಗ್ಗಲಿನಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಟ್ರಿಪ್‌ಗಳ ಸಂಖ್ಯೆ ಹೆಚ್ಚಳ ಮಾಡಿರುವುದಾಗಿ ಬಿಎಂಆರ್ ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಂದ್ರಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ರಾತ್ರಿ 3.25 ಲಕ್ಷ ಜನ ಪ್ರಯಾಣ
ಹೊಸ ವರ್ಷಾಚರಣೆ ಹಾಗೂ ಭಾನುವಾರವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದ್ದಾರೆ. ಎರಡೂ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದು, ಡಿಸೆಂಬರ್ ೩೧ರ ತಡರಾತ್ರಿಯವರೆಗೂ ಬರೋಬ್ಬರಿ 3.25 ಲಕ್ಷಕ್ಕಿಂತ ಹೆಚ್ಚು ಜನರು ಪ್ರಯಾಣ ಮಾಡಿದ್ದಾರೆ. ಇದರಿಂದ ೯೮.೧೦ ಲಕ್ಷ ಆದಾಯ ಗಳಿಸಿದೆ.
ರಾತ್ರಿ 11 ಗಂಟೆಯಿಂದ 2 ಗಂಟೆವರೆಗೆ 5.13 ಲಕ್ಷ ರು. ಆದಾಯ ಗಳಿಸಿದೆ. ನೇರಳೆ ಮಾರ್ಗದಲ್ಲಿ 1.69 ಲಕ್ಷ ಪ್ರಯಾಣಿಕರು ಹಾಗೂ ಹಸಿರು ಮಾರ್ಗದಲ್ಲಿ 1.56 ಲಕ್ಷ ಜನ ಪ್ರಯಾಣಿಸಿದ್ದಾರೆ. ಅಲ್ಲದೆ, ರಾತ್ರಿ 11 ರಿಂದ 2ರವರೆಗೆ ನೇರಳೆ ಮಾರ್ಗದಲ್ಲಿ 20886, ಹಾಗೂ ಹಸಿರು ಮಾರ್ಗದಲ್ಲಿ 10,230 ಜನ ಪ್ರಯಾಣ ಮಾಡಿರುವುದಾಗಿ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
