ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಮೈಸೂರು ಜಿಲ್ಲಾ ಯುವ ಪದಾಧಿಕಾರಿಗಳು

First Published 3, Mar 2018, 5:48 PM IST
Mysore BJP Youth wing office bearers resign
Highlights

ಜಿಲ್ಲಾ ಯುವ ಮೋರ್ಚಾದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಸದ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ವಿರುದ್ಧ ಪದಾಧಿಕಾರಿಗಳು ತಿರುಗಿ ಬಿದ್ದಿದ್ದಾರೆ.

ಮೈಸೂರು: ಜಿಲ್ಲಾ ಯುವ ಮೋರ್ಚಾದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಸದ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ವಿರುದ್ಧ ಪದಾಧಿಕಾರಿಗಳು ತಿರುಗಿ ಬಿದ್ದಿದ್ದಾರೆ.

'ಪ್ರತಾಪ್ ಸಿಂಹ ನಡವಳಿಕೆ ವಿರೋಧಿಸಿ, ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ತಮ್ಮ ಸ್ವಾರ್ಥಕ್ಕೆ ಪ್ರತಾಪ್ ಸಿಂಹ ಪಕ್ಷವನ್ನು ಬಲಿ ಕೊಡುತ್ತಿದ್ದಾರೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಏಕ ಪಕ್ಷೀಯ ಮಾರ್ಗ ಅನುಸರಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಬದಲಾವಣೆ ನಂತರ ಗ್ರಾಮಾಂತರ ಭಾಗದ ಪದಾಧಿಕಾರಿಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಮೈಸೂರಿಗೆ ಮೋದಿ, ಅಮಿತ್ ಶಾ ಬಂದಾಗಲೂ ಗ್ರಾಮಾಂತರ ಯುವ ಮೋರ್ಚಾವನ್ನು ಕಡೆಗಣಿಸಿದ್ದಾರೆ,' ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.

'ಗ್ರಾಮಾಂತರ ಭಾಗದಲ್ಲಿ ಆಯೋಜನೆಗೊಳ್ಳುವ ಯಾವುದೇ ಕಾರ್ಯಕ್ರಮದಲ್ಲಿಯೂ ಪ್ರತಾಪ್ ಸಿಂಹ ಭಾಗವಹಿಸುವುದಿಲ್ಲ. ಯಾವುದೇ ಜವಾಬ್ದಾರಿ ಇಲ್ಲದ ಕಾರಣಕ್ಕೆ ಮನನೊಂದು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇವೆ. ತಮ್ಮ ಸ್ಥಾನಗಳಿಂದ ಹಿಂದೆ ಸರಿದು ಕೇವಲ ಪಕ್ಷದ ಸದಸ್ಯರಾಗಿರಲು ನಿರ್ಧರಿಸಿದ್ದೇವೆ,' ಎಂದು ಪದಾಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಭೇಟಿ ಮಾಡಿ ರಾಜೀನಾಮೆ ಸಲ್ಲಿಸದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿಗಳಾದ ಸಂದೀಪ್, ಪ್ರಸನ್ನ ಹಾಗೂ ಸಮಂತ್, ತಾಲೂಕು ಅಧ್ಯಕ್ಷರಾದ ಕಾಂತರಾಜು, ಉಮಾಶಂಕರ್, ಶಂಕರ್‌ ರಾಜೀನಾಮೆ ಸಲ್ಲಿಸಿದ್ದಾರೆ.
 

loader