ನಿರಂತರ ಬರದಿಂದ ತತ್ತರಿಸಿರುವ ಜೊತೆಗೆ ತೀವ್ರ ಬಿರುಗಾಳಿಯಿಂದಾಗಿ ಬೆಳೆದಿರುವ ಬೆಳೆಗಳು ನಷ್ಟವಾಗಿದೆ. ಆತಂಕದಲ್ಲಿರುವ ರೈತರಿಗೆ ಸಾಂತ್ವನ ಹೇಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ನಾಪತ್ತೆಯಾಗಿದ್ದು, ಇಂತಹ ನಿರ್ಲಕ್ಷ್ಯ ದಿಂದ ಜನಪ್ರತಿನಿಧಿಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಜಿಲ್ಲೆಯ ಸಾರ್ವಜನಿಕರನ್ನು ಕಾಡುತ್ತಿದೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೋಷನ್‌ಬೇಗ್ ಅವರು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬದಲಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಉಸ್ತು ವಾರಿ ನೀಡಲಾಯಿತು. ಆದರೆ ಸಚಿವರಾಗಿ ಆಯ್ಕೆ ಯಾದ ದಿನದಿಂದ ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಆಗಮಿಸುತ್ತಿದ್ದ ಸಚಿವರು ಇತ್ತೀಚೆಗೆ ಅವುಗಳಿಗೂ ಗೈರು ಹಾಜರಾಗುವ ಮೂಲಕ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಜನತೆಗೆ ತೀವ್ರ ನಿರಾಸೆ ಮೂಡಿಸುವಂತಾಗಿದೆ. ಬರನಿರ್ವಹಣೆಯಲ್ಲೂ ಲೋಪ: ಜಿಲ್ಲೆಯಾದ್ಯಂತ ಕಳೆದ 10 ವರ್ಷಗಳಿಂದ ನಿರಂತರ ಬರ ಕಾಡುತ್ತಿದೆ, ಅಂತರ್ಜಲ ಮಟ್ಟಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.
ಇನ್ನು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಅತಿಯಾದ ಆಳದಿಂದ ನೀರು ತೆಗೆಯುತ್ತಿರುವ ಕಾರಣ ಫೆä್ಲೕರೈಡ್ ಸೇರಿದಂತೆ ಹಲವು ಲವಣಾಂಶಗಳು ಅಪಾಯ ಮಟ್ಟಮೀರಿರುವುದರಿಂದ ಜನರು ಫೆä್ಲೕರೋಸಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗ ಪರಿಹಾರಕ್ಕೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೇ ಬಾರದಿರುವುದು ಆಡಳಿತ ಕುಂಠಿತಗೊಳ್ಳಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಒಕ್ಕೂರಲ ಆರೋಪವಾಗಿದೆ. ಸಚಿವರು ಮತ್ತು ಸಂಸದರು ಜಿಲ್ಲೆಯನ್ನು ಮರೆತಿರುವ ಕಾರಣ ಅಧಿಕಾರಿಗಳಿಗೆ ಭಯ ಇಲ್ಲವಾಗಿದ್ದು, ತಮಗೆ ಇಷ್ಟಬಂದಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮೀಣರು ಅಳವತ್ತುಕೊಂಡಿದ್ದಾರೆ. ಬರ ಸಮೀಕ್ಷೆಗಷ್ಟೇ ಸೀಮಿತವಾದ ಉಸ್ತುವಾರಿ: ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರಡ್ಡಿ ಅವರು ಸಚಿವರಾಗಿ ನೇಮಕವಾದ ನಂತರ ಜಿಲ್ಲೆಯ ಒಂದೆರಡು ಪ್ರಗತಿ ಪರಿಶೀಲನಾ ಸಭೆಗಳು, ಬರ ಸಮೀಕ್ಷೆ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಹಾಜರಾಗಿದ್ದು, ಜಿಲ್ಲೆಯಲ್ಲಿ ಬರ ತೀವ್ರರೂಪ ತಾಳಿದ ನಂತರ ಇತ್ತ ಮುಖ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಜಾನುವಾರುಗಳಿಗೆ ಮೇವು ನೀರಿಲ್ಲದೆ ಕಸಾಯಿಖಾನೆಗೆ ಮಾರಾಟ ಮಾಡುತ್ತಿರು ವುದು, ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸು ತ್ತಿದ್ದ ಸಾವಿರಾರು ಕುಟುಂಬಗಳು ಜಾನುವಾರುಗಳನ್ನು ಸಾಕಲಾರದೆ ಮಾರಾಟ ಮಾಡಿ ನಗರ ಪ್ರದೇಶಗಳತ್ತ ಗುಳೆ ಹೋಗುತ್ತಿದ್ದರೂ ಸಚಿವರು ಮಾತ್ರ ಈ ಕುರಿತು ಗಮನ ಹರಿಸದಿರುವುದು ಜಿಲ್ಲೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಂಸದರೂ ನಾಪತ್ತೆ!: ಕರಾವಳಿ ಜಿಲ್ಲೆಗಳಲ್ಲಿ ವಿಶ್ವಾಸ ಕಳೆದುಕೊಂಡ ವೇಳೆ ಸಂಸದ ವೀರಪ್ಪ ಮೊಯ್ಲಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಸಂಸತ್ ಕ್ಷೇತ್ರ. ಅಲ್ಲದೆ ಯುಪಿಎ ಸರ್ಕಾರದಲ್ಲಿ ಉನ್ನತ ಸಚಿವ ಸ್ಥಾನಗಳನ್ನು ಅನುಭವಿ ಸಲು ಮತ ಹಾಕಿದ ಜಿಲ್ಲೆಯ ಮತದಾರರನ್ನೇ ನಿರ್ಲಕ್ಷ್ಯ ಮಾಡುವಲ್ಲಿ ಸಂಸದ ವೀರಪ್ಪ ಮೊಯ್ಲಿ ಅವರು ಯಶಸ್ವಿಯಾಗಿದ್ದಾರೆ ಎಂಬುದು ಜಿಲ್ಲೆ ಜನತೆಯ ಅಳಲಾಗಿದೆ. ಅಲ್ಲದೆ ಇಡೀ ದೇಶದಾದ್ಯಂತ ಮೋದಿ ಅಲೆ ಇದ್ದರೂ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಸಂಸದ ವೀರಪ್ಪಮೊಯ್ಲಿ ಅವರು ಭರ್ಜರಿ ಜಯಗಳಿಸಲು ಕಾರಣವಾಗಿದ್ದು ಎತ್ತಿನಹೊಳೆ ಯೋಜನೆ. ಚುನಾವಣೆ ಘೋಷಣೆಯಾದ ದಿನವೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಚಿಕ್ಕಬಳ್ಳಾಪುರ ದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಡಿಸುವ ಜೊತೆಗೆ ಎರಡು ವರ್ಷಗಳಲ್ಲಿ ಈ ಭಾಗದ ಕೆರೆಗಳನ್ನು ಎತ್ತಿನಹೊಳೆ ನೀರಿನಿಂದ ತುಂಬಿಸುವ ಭರವಸೆಯನ್ನು ಸಂಸದರು ನೀಡಿದ್ದರು. ಆದರೆ ಅವರು ಭರವಸೆ ನೀಡಿ ಈಗಾಗಲೇ ಮೂರು ವರ್ಷಗಳು ಕಳೆದಿದೆ.
ಇನ್ನು 10 ವರ್ಷಗಳು ಕಳೆದರೂ ಎತ್ತಿನಹೊಳೆ ನೀರು ಬರುವ ಸೂಚನೆಗಳು ಕಾಣುತ್ತಿಲ್ಲ, ಹಾಗಾಗಿ ಮತ್ತೊಮ್ಮೆ ಜಿಲ್ಲೆಯ ಜನತೆಯನ್ನು ಮೋಸ ಮಾಡಲು ಸಂಸದರು ಸಿದ್ಧರಾಗುತ್ತಿದ್ದಾರೆ ಎಂಬುದು ಶಾಶ್ವತ ನೀರಾವರಿ ಹೋರಾಟಗಾರರ ಆರೋಪವಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ಶಾಪವೋ ಎಂಬಂತೆ ಕಳೆದ 20 ವರ್ಷಗಳಿಂದ ಜಿಲ್ಲೆಯವರು ಸಚಿವ ಸ್ಥಾನ ಅಲಂಕರಿಸಿಲ್ಲ, ಹೊರಗಿನವರೇ ಉಸ್ತುವಾರಿ ಸಚಿವರಾಗುತ್ತಿರುವ ಕಾರಣ ಜಿಲ್ಲೆಯ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂಬುದು ಪ್ರಜ್ಞಾವಂತರ ಆರೋಪವಾಗಿದೆ. ಉಸ್ತುವಾರಿ ಸಚಿವರು ಮತ್ತು ಸಂಸದರು ಈಗಲಾದರೂ ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸುವರೇ ಎಂಬುದನ್ನು ಕಾದುನೋಡಬೇಕಿದೆ.
