- ಕಾಂಗ್ರೆಸ್ ಸರಕಾರ ಇರುವಾಗ ಆಗದ್ದನ್ನು ಬಿಜೆಪಿ ಮಾಡಿ ತೋರಿಸುತ್ತಿದೆ.- ಗೋವಾ ಸಿಎಂ ನೀರು ಕೊಡಲು ಒಪ್ಪಿಗೆ ನೀಡುತ್ತಿರುವುದು ಮುಖ್ಯ, ಯಾರಿಗೆ ಪತ್ರ ಬರೆದಿದ್ದಾರೆಂಬುವುದು ಮುಖ್ಯವೆಲ್ಲ- ಎಚ್ಡಿಕೆ ಬೇಜವಾಬ್ದಾರಿ ಮನುಷ್ಯನೆಂದ ಬಿಎಸ್‌ವೈ
ಹುಬ್ಬಳ್ಳಿ: 'ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ ಎಂದು ಹೇಳುತ್ತಿದ್ದಾರೆ. ಆದರೆ, ಡಾ.ಮನಮೋಹನ್ ಸಿಂಗ್ ಎರಡು ಅವಧಿಗಳಿಗೆ ಪ್ರಧಾನಿಯಾದಾಗ ಈ ವಿಷಯದಲ್ಲೇಕೆ ಭಾಗಿಯಾಗಲಿಲ್ಲ?' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
'ಈ ಸಮಸ್ಯೆ ಬಗೆ ಹರಿಸಲು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಯತ್ನಿಸಲೇ ಇಲ್ಲ. ಆದರೆ, ಬಿಜೆಪಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಮಾತುಕತೆಗೆ ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸಿ ಎನ್ನಲಾಗಿತ್ತು, ಇದೀಗ ಅವರು ಒಪ್ಪಿಗೆ ಸೂಚಿಸಿ, ಪತ್ರ ಬರೆದಿದ್ದಾರೆ,,' ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
'ಇಂಥವರಿಗೇ ಪತ್ರ ಬರೆಯಿರಿ ಎಂದು ಗೋವಾ ಮುಖ್ಯಮಂತ್ರಿಗೆ ಹೇಳಲಾಗುವುದಿಲ್ಲ, ಇದೀಗ ಅವರು ಕುಡಿಯುವ ನೀರು ಕೊಡಲು ಒಪ್ಪಿಗೆ ಸೂಚಿಸಿರುವುದು ಮುಖ್ಯವಾಗುತ್ತೇ ಹೊರತು, ಯಾರಿಗೆ ಪತ್ರ ಬರೆದಿದ್ದಾರೆಂಬುವುದು ಮುಖ್ಯವಲ್ಲ,' ಎಂದು ಹೇಳಿದ್ದಾರೆ.
'ಈ ವಿಷಯ ಬಗೆ ಹರಿಸುವಲ್ಲಿ ಕಾಂಗ್ರೆಸ್ ದೊಂಬರಾಟ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಗೋವಾ ಸಿಎಂ ಮನವೊಲಿಸಲು ಯತ್ನಿಸಿದ್ದೇವೆ. ಕಾಂಗ್ರೆಸ್ಗೆ ಹದಿನೈದು ವರ್ಷಗಳಿಂದ ಬಗೆಹರಿಸಲಾಗದ ವಿಷಯವನ್ನು ಬಿಜೆಪಿ ಬಗೆಹರಿಸುತ್ತಿದೆ. ಗೋವಾ ಸಿಎಂ ಬರೆದ ಪತ್ರವನ್ನು ನ್ಯಾಯಾಧಿಕರಣ ಮುಂದಿಟ್ಟರೆ ಸಮಸ್ಯೆ ಬಗೆಹರಿಯಲಿದೆ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್ಡಿಕೆ ಬೇಜವಾಬ್ದಾರಿ ಮನುಷ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಜವಾಬ್ದಾರಿ ಮನುಷ್ಯ. ಈ ಅಪ್ಪ ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸಲು ಮನಸ್ಸಿಲ್ಲ, ಎಂದು ಆರೋಪಿಸಿದರು.
