ಪತ್ನಿ ಬಳಸಿ ಹನಿಟ್ರ್ಯಾಪ್ : ಗಾರೆ ಕೆಲಸಗಾರನ ಬಂಧನ

First Published 11, Feb 2018, 11:22 AM IST
Labourer Arrested Honey Trapping businessman
Highlights

ತನ್ನ ಪತ್ನಿ ಬಳಸಿಕೊಂಡು ಗ್ರಾನೈಟ್ ಯಂತ್ರಗಳ ಸರ್ವಿಸ್ ಸೆಂಟರ್ ಮಾಲೀಕನನ್ನು ‘ಹನಿಟ್ರ್ಯಾಪ್’ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಕಾರ್ಮಿಕನೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ತನ್ನ ಪತ್ನಿ ಬಳಸಿಕೊಂಡು ಗ್ರಾನೈಟ್ ಯಂತ್ರಗಳ ಸರ್ವಿಸ್ ಸೆಂಟರ್ ಮಾಲೀಕನನ್ನು ‘ಹನಿಟ್ರ್ಯಾಪ್’ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಕಾರ್ಮಿಕನೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನಕನಗರದ ನಿವಾಸಿ ಮಂಜುನಾಥ್ ಬಂಧಿತನಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಆರೋಪಿ ಪತ್ನಿ ಆಯೇಷಾ ಅಲಿಯಾಸ್ ಮೋನಿಕಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.  ಇತ್ತೀಚೆಗೆ ಗ್ರಾನೈಟ್ ಯಂತ್ರಗಳ ಸರ್ವಿಸ್ ಸೆಂಟರ್ ಮಾಲೀಕನನ್ನು ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ  ಪರಿಚಯಿಸಿಕೊಂಡು ದಂಪತಿ ಈ ಕೃತ್ಯ ಎಸಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆಯಲ್ಲೇ ಅಡ್ಡ ಹಾಕಿದ್ದಳು: ಮೂರು ವರ್ಷಗಳ ಹಿಂದೆ ಜಯಮಹಲ್ ರಸ್ತೆಯಲ್ಲಿ ಹೋಗುತ್ತಿದ್ದಾಗ ನನ್ನನ್ನು ಭೇಟಿಯಾಗಿದ್ದ ಯುವತಿಯೊಬ್ಬಳು, ನನ್ನ ಹೆಸರು ಆಯೇಷಾ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ನೆರವು ನೀಡಿ ಎಂದು ಕೋರಿದ್ದಳು. ಆಗ 2 ಸಾವಿರ ನಗದು ಹಣ ನೀಡಿದ ನಾನು, ಮತ್ತೇನಾದರೂ ಸಹಾಯ ಬೇಕಿದ್ದರೆ ಕೇಳುವಂತೆ ಮೊಬೈಲ್ ಸಂಖ್ಯೆ ಕೊಟ್ಟಿದ್ದೆ. ಕೆಲ ದಿನಗಳ ನಂತರ ಕರೆ ಮಾಡಿದ ಆಕೆ, ಮಕ್ಕಳ ಶಿಕ್ಷಣಕ್ಕೆ ನೆರವಿಗೆ ವಿನಂತಿಸಿದ್ದಳು. ಆಗಲೂ ಸರ್ವಿಸ್ ಸೆಂಟರ್ ಬಳಿ ಕರೆಸಿ ಕೊಂಡು 5 ಸಾವಿರ ಕೊಟ್ಟು ಕಳುಹಿಸಿದ್ದೆ. ಮತ್ತೆ ಬೇಡಿಕೆ ಇಟ್ಟಾಗ, ಇನ್ನು ಮುಂದೆ ಕರೆ ಮಾಡದಂತೆ ಎಚ್ಚರಿಸಿದ್ದೆ. ಆದರೂ ಆಕೆಯಿಂದ ನಿರಂತರವಾಗಿ ಕರೆಗಳು ಬರುತ್ತಿದ್ದವು ಎಂದು ಫಿರ್ಯಾದುದಾರರು ದೂರಿನಲ್ಲಿ ತಿಳಿಸಿದ್ದಾರೆ.

ಮನೆಗೇ ಬಂದಳು: 2017ರ ಡಿ.25 ರಂದು ಕರೆ ಮಾಡಿದ್ದ ಆಯೇಷಾ, ನನಗೆ ಹಣ ತುರ್ತಾಗಿ ಬೇಕಿದೆ. ಹಣ ನೀಡುವುದಾದರೆ ನಿಮ್ಮೊಂದಿಗೆ ದೈಹಿಕ ಸಂಪರ್ಕಕ್ಕೂ ನಾನು ಸಿದ್ದಳಿದ್ದೇನೆ ಎಂದು ಹೇಳಿದ್ದಳು. ಈ ಮಾತಿಗೆ ಒಪ್ಪಿದ ನಾನು, ಆ ದಿನ ನನ್ನ ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದರಿಂದ ಮನೆಗೇ ಬರುವಂತೆ ಸೂಚಿಸಿದ್ದೆ. ಬಳಿಕ ಮಧ್ಯಾಹ್ನ 2.30ರ ಸುಮಾರಿಗೆ ಆಕೆ ಮನೆಗೆ ಬಂದಳು. ಕೆಲ ಹೊತ್ತಿನಲ್ಲೇ ಮನೆಗೆ ನುಗ್ಗಿದ ಮಂಜುನಾಥ್, ನನ್ನ ಹೆಂಡತಿ ಜತೆ ಅನೈತಿಕ ಸಂಬಂಧ ಹೊಂದಿದ್ದೀಯಾ? ನೀನು 2 ಲಕ್ಷ ಕೊಡದಿದ್ದರೆ ನೆರೆಹೊರೆಯವರನ್ನು ಕರೆಸಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಿದ್ದ. ಆಗ ಮರ್ಯಾದೆಗೆ ಅಂಜಿ ಅವರಿಗೆ 80 ಸಾವಿರ ಕೊಟ್ಟು ಕಳುಹಿಸಿದ್ದೆ. ಫೆ.5 ರಂದು ಪುನಃ ಕರೆ ಮಾಡಿ 80 ಸಾವಿರಕ್ಕೆ ಬೇಡಿಕೆ ಇಟ್ಟರು. ಪತ್ನಿ ಜತೆಗಿನ ಲೈಂಗಿಕ ಕ್ರಿಯೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವುದಾಗಿ ಬೆದರಿಸಿದ್ದ. ಈ ಬ್ಲ್ಯಾಕ್‌ಮೇಲ್‌ಗೆ ರೋಸಿ ಹೋಗಿ ಠಾಣೆಗೆ ದೂರು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಈ ದೂರಿನ್ವಯ ಐಪಿಸಿ 384 ರಡಿ (ಸುಲಿಗೆ) ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಅಮೃತಹಳ್ಳಿ ಠಾಣೆ ಪೊಲೀಸರು, ದೂರುದಾರನಿಂದ ಮಂಜುನಾಥ್‌ಗೆ ಕರೆ ಮಾಡಿಸಿದ್ದರು. ಆಗ ಆತ 80 ಸಾವಿರ ತೆಗೆದುಕೊಂಡು ಹೆಬ್ಬಾಳ ಮೇಲ್ಸೇತುವೆ ಬಳಿ ಬರುವಂತೆ ತಿಳಿಸಿದ್ದ. ಕೂಡಲೇ ಅಲ್ಲಿಗೆ ಮಪ್ತಿಯಲ್ಲಿ ತೆರಳಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಪತಿಯ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಆಯೇಷಾ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡಗಳಲ್ಲಿ ಗಾರೆ ಕೆಲಸ ಮಾಡುತ್ತೇನೆ. ಕೆಲ ವರ್ಷಗಳ ಹಿಂದೆ ಅನಾರೋಗ್ಯದ ಕಾರಣಕ್ಕೆ ಮೊದಲ ಪತ್ನಿ ಮೃತಪಟ್ಟ ನಂತರ ಆಯೇಷಾಳನ್ನು ಪ್ರೀತಿಸಿ ಮದುವೆಯಾದೆ. ಇತ್ತೀಚಿಗೆ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆ ವ್ಯಕ್ತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದೆವು ಎಂದು ಮಂಜುನಾಥ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

loader