ಶಿವಮೊಗ್ಗ(ಅ.04): ಇಂದು ಜಾಗತಿಕ ಮಟ್ಟದಲ್ಲಿ ತೆಲುಗು, ತಮಿಳು ಭಾಷೆ ಚಿತ್ರಗಳು ಪೈಪೋಟಿ ನೀಡುತ್ತಿವೆ. ಆದರೆ ಕನ್ನಡ ಚಿತ್ರೋದ್ಯಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಕನ್ನಡ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವಂತಾಗಬೇಕು. ಇದಕ್ಕೆ ಪ್ರೇಕ್ಷಕರ ಬೆಂಬಲ ಅತಿ ಮುಖ್ಯ ಎಂದು ಕಿರಗೂರಿನ ಗಯ್ಯಾಳಿಗಳು ಚಿತ್ರ ಖ್ಯಾತಿ ನಿರ್ದೇಶಕಿ ಸುಮನಾ ಕಿತ್ತೂರು ಹೇಳಿದರು.

ಮಂಗಳವಾರ ಲಕ್ಷ್ಮೀ ಚಿತ್ರಮಂದಿರದಲ್ಲಿ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಇಲಾಖೆ, ಬೆಳ್ಳಿಮಂಡಲ ಹಾಗೂ ಕರ್ನಾಟಕ ಚಲನಚಿತ್ರ ಮಂಡಳಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಶಿವಮೊಗ್ಗ ದಸರಾ ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಿ ಸುಮನಾ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನತೆ ಮನೋರಂಜನೆಯ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಇಂತಹ ಚಿತ್ರಗಳು ಚಿತ್ರರಂಗಕ್ಕೆ ಅವಶ್ಯಕ. ಆದರೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸಾಮಾಜಿಕ ಕಳಕಳಿವುಳ್ಳ ಅನೇಕ ಚಿತ್ರಗಳು ಬಿಡುಗಡೆಯಾಗುತ್ತಲಿವೆ. ವೀಕ್ಷಕರು ಇಂತಹ ಚಿತ್ರಗಳನ್ನು ಬೆಂಬಲಿಸ ಬೇಕು. ಇತ್ತೀಚೆಗೆ ಕನ್ನಡದಲ್ಲಿ ಸದಭಿರುಚಿ ಚಿತ್ರಗಳು ತೆರೆ ಕಾಣುತ್ತಿವೆ. ಹೊಸಬರು ಹೆಚ್ಚಾಗಿ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ಇವರಿಗೆ ಪ್ರೇಕ್ಷಕರ ಬೆಂಬಲ ಅಗತ್ಯ. ಇತ್ತೀಚೆಗೆ ತೆರೆ ಕಂಡ ತಿಥಿ ಚಿತ್ರ ವಿಶ್ವ ಸಿನೆಮಾ ಪಟ್ಟಿಗೆ ಸೇರ್ಪಡೆಯಾಗಿದೆ. ಇದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರವೆಂದು ಹೇಳಿದರು.

ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಮಾತನಾಡಿ, ರಾಜ್ಯದಲ್ಲಿ ದಸರಾ ಹಬ್ಬ ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟುವೈಭವಯುತವಾಗಿ ದಸರಾ ಆಚರಣೆ ನಡೆಯಲಿ ಎಂದರು.

ಜಿಲ್ಲಾಧಿಕಾರಿ ಇಕ್ಕೇರಿ, ಪಾಲಿಕೆ ಆಯುಕ್ತೆ ತುಷಾರ ಮಣಿ, ಚಿತ್ರನಟ ತ್ರಿಲೋಕ್‌, ಪಾಲಿಕೆ ಸದಸ್ಯೆ ಗೌರಿ ಶ್ರೀನಾಥ್‌, ಶಿವಮೊಗ್ಗ ಬೆಳ್ಳಿ ಮಂಡಲ ಸಂಚಾಲಕ ವೈದ್ಯ, ವಾರ್ತಾಧಿಕಾರಿ ಹಿಮಂತರಾಜ್‌ ಇತರರು ಇದ್ದರು.