Asianet Suvarna News Asianet Suvarna News

ಭಗವದ್ಗೀತೆ ಸುಟ್ಟ ಭಗವಾನ್ ಬಂಧನ, ಜಾಮೀನು

- ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವದ್ಗೀತೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕರಣ

- ಪ್ರಾಧ್ಯಾಪಕ ಮಹೇಶಚಂದ್ರ ಗುರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿಯೂ ಅರೆಸ್ಟ್, ಜಾಮೀನು ಪಡೆದು ನಂತರ ಬಿಡುಗಡೆ

K S Bhagawan and other two arrested for bhagavad gita case

ಮೈಸೂರು: ಭಗವದ್ಗೀತೆ ಗ್ರಂಥಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ ಕೆ.ಎಸ್.ಭಗವಾನ್ ಸೇರಿದಂತೆ ಮೂವರನ್ನು ಬಂಧಿಸಿ, ಇಲ್ಲಿನ ನಾಲ್ಕನೇ ಜೆಎಂಎಫ್'ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ, ಪತ್ರಿಕೋದ್ಯಮ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಅವರನ್ನೂ ಭಗವಾನ್ ಅವರೊಂದಿಗೆ ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇನ್ನು ಮುಂದೆ ವಿಚಾರಣೆಗೆ ತಪ್ಪದೇ ಕೋರ್ಟಿಗೆ ಹಾಜರಾಗಬೇಕೆಂದು ಆದೇಶಿಸಿ, ಮೂವರಿಗೂ ಜಾಮೀನು ಮಂಜೂರು ಮಾಡಿದೆ.

ಏನಿದು ಪ್ರಕರಣ?

ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ 'ಭಗವದ್ಗೀತೆ ರಾಷ್ಟ್ರೀಯ ಗ್ರಂಥವೇ?' ಎಂಬ ವಿಷಯದ ಮೇಲೆ 2014ರಲ್ಲಿ ನಡೆದ ವಿಚಾರಣಾ ಸಂಕಿರಣದಲ್ಲಿ ಭಗವದ್ಗೀತೆ ಸುಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಈ ಮೂವರ ವಿರುದ್ಧ  ದೂರು ದಾಖಲಿಸಿದ್ದವು. ಈ ದೂರಿಗೆ ಸಂಬಂಧಿಸಿದಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸರು ಈ ಮೂವರನ್ನು ಬಂಧಿಸಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಮೂವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ಮೂವರನ್ನೂ ಬಂಧಿಸಿದ ಪೊಲೀಸರು ಮಧ್ಯಾಹ್ನ 3 ಗಂಟೆ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

Follow Us:
Download App:
  • android
  • ios