Asianet Suvarna News Asianet Suvarna News

ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಬೋರ್ ವೆಲ್ ಕೊರೆಸಲು ಜಿಪಂ ಅಧ್ಯಕ್ಷೆ ಸೂಚನೆ

ಜಿಲ್ಲೆಯಲ್ಲಿ ತೀವ್ರ ಕುಡಿವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಎರಡು ಮೂರು ಕೊಳವೆ ಬಾವಿ ಕೊರೆಯಿಸುವ ಬದಲು ಅವಶ್ಯಕತೆ ಇರುವ ಕಡೆ ಒಂದೇ ಕೊಳವೆ ಬಾವಿಯನ್ನು 900 ಅಡಿಯವರೆಗೆ ಕೊರೆಯಿಸಲು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸೂಚನೆ ನೀಡಿದರು.

JP Chairmen Directs to dig borewell where scarcity of drinking water

ಚಿತ್ರದುರ್ಗ (ನ.29): ಜಿಲ್ಲೆಯಲ್ಲಿ ತೀವ್ರ ಕುಡಿವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಎರಡು ಮೂರು ಕೊಳವೆ ಬಾವಿ ಕೊರೆಯಿಸುವ ಬದಲು ಅವಶ್ಯಕತೆ ಇರುವ ಕಡೆ ಒಂದೇ ಕೊಳವೆ ಬಾವಿಯನ್ನು 900 ಅಡಿಯವರೆಗೆ ಕೊರೆಯಿಸಲು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸೂಚನೆ ನೀಡಿದರು.

ಮಂಗಳವಾರ ಜಿಪಂ ಮಿನಿ ಸಭಾಂಗಣದಲ್ಲಿ ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕುಡಿವ ನೀರಿಗಾಗಿ ಕೊರೆಯಿಸುವ ಕೊಳವೆ ಬಾವಿಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕಗೊಳಿಸುವುದು, ಕೊಳವೆ ಬಾವಿ ಕೊರೆಸಿರುವ ಬೋರ್‌ವೆಲ್ ಏಜೆನ್ಸಿಯವರಿಗೆ ಆದ್ಯತೆ ಮೇಲೆ ಹಣ ಪಾವತಿಸುವುದು. ನಿರಂತರ ಜ್ಯೋತಿ ಅಕ್ರಮ ಬಳಕೆಗೆ ಕಡಿವಾಣ ಹಾಕುವುದು, ಬರಗಾಲವಿರುವ ಹಿನ್ನೆಲೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಕಡ್ಡಾಯವಾಗಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ನಿರ್ದೇಶನ ನೀಡಿದರು.

ಡಿ.13 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗುವ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾರ್ಯಾನುಷ್ಠಾನಗಳ ಬಗ್ಗೆ ಸಬೂಬು ಹೇಳದೆ ಸಮರೋಪಾದಿಯಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿದ ಬಗ್ಗೆ ಮಾಹಿತಿ ನೀಡಬೇಕು. ಸಭೆಗೆ ಅಧಿಕಾರಿಗಳು ಖುದ್ದಾಗಿ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಿರಬೇಕು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಕ್ರಿಯಾ ಯೋಜನೆ ತಯಾರಿಸದೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಒಂದು ಗ್ರಾಮದಲ್ಲಿ ಎರಡು, ಮೂರು, ನಾಲ್ಕು ಕೊಳವೆ ಬಾವಿ ಕೊರೆಯುತ್ತಾ ಹೋದರೆ ಅದಕ್ಕೆ ಕೊನೆ ಎಲ್ಲಿ ಎಂದು ಪ್ರಶ್ನಿಸಿದರು.

ಒಂದು ಕೊಳವೆ ಬಾವಿಯನ್ನೇ 900 ಅಡಿಯತನಕ ಕೊರೆದು ಆ ಗ್ರಾಮದಲ್ಲಿ ನೀರು ಬೀಳದ ಸೂಚನೆ ಕಂಡು ಬಂದರೆ ಪರ್ಯಾಯ ಮಾರ್ಗಗಳ ಬಗ್ಗೆ ಅಧಿಕಾರಿಗಳು ಕಂಡು ಹಿಡಿಯ ಬೇಕು. ಒಂದು ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿ ಕೊರೆದಿದ್ದರೆ ಒಂದು ಕೊಳವೆ ಬಾವಿಯಲ್ಲಿ ನೀರಿಲ್ಲದಿದ್ದರೆ ಉಳಿದ ಮೂರು ಕೊಳವೆ ಬಾವಿಯಿಂದ ನೀರಿಲ್ಲದ ಪ್ರದೇಶಕ್ಕೆ ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಬೇಕು ಎಂದರು.

ಸರ್ಕಾರದಿಂದ ಕೊರೆಸಲಾಗಿರುವ ಕೊಳವೆ ಬಾವಿಗಳ ಪಕ್ಕದಲ್ಲಿ ಕೊಳವೆ ಬಾವಿ ಕೊರೆಯುವ ಬೋರ್‌ವೆಲ್ ಏಜೆನ್ಸಿ ಹಾಗೂ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅದೇ ಬೋರ್‌ವೆಲ್‌ಗಳನ್ನು ಸಾರ್ವಜನಿಕರ ನೀರು ಸರಬರಾಜಿಗೆ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

14 ನೇ ಹಣಕಾಸಿನಲ್ಲಿ ಆಯಾ ತಾಲೂಕುಗಳಿಗೆ ಬಿಡುಗಡೆಯಾಗಿರುವ ಹಣವನ್ನು ಸಂಪೂರ್ಣವಾಗಿ ಕುಡಿವ ನೀರಿನ ಸರಬರಾಜಿಗೆ ಬಳಸಿಕೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು. ತೀವ್ರ ಅಭಾವವಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕೆಂದು ಅಧ್ಯಕ್ಷರು ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಅವರನ್ನೊಳಗೊಂಡ ಒಂದು ಸಮನ್ವಯ ಸಮಿತಿ ರಚನೆ ಮಾಡಿಕೊಂಡು ಸಂಘಟಿತ ರೂಪದಲ್ಲಿ ಕುಡಿವ ನೀರಿನ ಬಗ್ಗೆ ಕಾರ್ಯ ಪ್ರವೃತ್ತರಾಗಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

Follow Us:
Download App:
  • android
  • ios