- ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಸುದೀಪ್- ಜೆಡಿಎಸ್ ಮುಖಂಡ ಕುಮಾರಸ್ವಾಮಿಯರಿಗೂ ಹುಟ್ಟುಹಬ್ಬಕ್ಕೆ ವಿಶೇಷ ಆತಿಥ್ಯ ನೀಡಿದ್ದ ಕಿಚ್ಚ- ಮೊಳಕಾಲ್ಮೂರಿನಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಬಂಧ ಊಹಾಪೋಹ.

ಬೆಂಗಳೂರು: ಕಿಚ್ಚ ಸುದೀಪ್ ಇತ್ತೀಚೆಗೆ ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದಂತೆ ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ರಾಜಕೀಯಕ್ಕೆ ಬರುವ ಊಹಾಪೋಹಗಳಿಗೆ ರೆಕ್ಕೆ ಬಂದಿತ್ತು. 

ಈ ಬೆನ್ನಲ್ಲೇ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದಂದು, ಸ್ವತಃ ತಾವೇ ಅಡುಗೆ ಮಾಡಿ ಬಡಿಸಿದ್ದರಿಂದ ಕಿಚ್ಚ ಕಾಂಗ್ರೆಸ್ ಸೇರ್ತಾರೋ, ಜೆಡಿಎಸ್ ಸೇರ್ತಾರೋ ಎಂಬ ಚರ್ಚೆಗಳು ಆರಂಭವಾಗಿದ್ದವು.

ಈ ನಡುವೆಯೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ರಮ್ಯಾ ಕಿಚ್ಚ ಅವರನ್ನು ಭೇಟಿಯಾಗಿದ್ದು, ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಜಸ್ಟ್ ಮಾತ್ ಮಾತಲ್ಲಿ ರಮ್ಯಾ ಹಾಗೂ ಸುದೀಪ್ ಒಟ್ಟಾಗಿ ಅಭಿನಯಿಸಿದ್ದು, ಇವರಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಈ ಕಾರಣದಿಂದ ಸುದೀಪ್ ರಾಜಕೀಯಕ್ಕೆ ಬರುವುದು ಗ್ಯಾರಂಟಿ ಎನ್ನಲಾಗುತ್ತಿದ್ದರೂ, ಯಾವುದೇ ವೇದಿಕೆಯಲ್ಲಿಯೂ ಈ ಇಬ್ಬರು ಯಾವುದೇ ಸ್ಪಷ್ಟನೆ ನೀಡಿಲ್ಲ. 

ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಈ ಸಂಬಂಧವಾಗಿ ಸುದೀಪ್ ಅವರನ್ನು ಸಂಪರ್ಕಿಸಿದಾಗ, 'ಬುಲ್‌ಶಿಟ್' ಎಂದು ಉತ್ತರಿಸಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶ ಹಾಗೂ ಮೊಳಕಾಲ್ಮೂರಿನಿಂದ ಸ್ಪರ್ಧಿಸುವ ಸುದ್ದಿ ಹುರುಳಿಲ್ಲದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.