‘ಏಕರೂಪ ನಾಗರಿಕ ಸಂಹಿತೆ’ ಎಂಬ ಬೆದರಿಕೆ ಅಸ್ತ್ರ ಪ್ರಯೋಗಿಸುವ ಬದಲು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಅಂಕಣಕಾರರಾದ ಹಲೀಮತ್ ಸಅದಿಯಾ ಒತ್ತಾಯಿಸಿದರು.

ದಾವಣಗೆರೆ (ಡಿ.01): ‘ಏಕರೂಪ ನಾಗರಿಕ ಸಂಹಿತೆ’ ಎಂಬ ಬೆದರಿಕೆ ಅಸ್ತ್ರ ಪ್ರಯೋಗಿಸುವ ಬದಲು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಅಂಕಣಕಾರರಾದ ಹಲೀಮತ್ ಸಅದಿಯಾ ಒತ್ತಾಯಿಸಿದರು.

ನಗರದ ರೋಟರಿ ಬಾಲ ಭವನದಲ್ಲಿ ಗುರುವಾರ ಮುಸ್ಲಿಂ ಮಹಿಳಾ ಒಕ್ಕೂಟ ಮತ್ತು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಾಚಾರ್ ವರದಿಯನ್ನು ಪ್ರಾಮಾಣಿಕ ಹಾಗೂ ಕಾಳಜಿಯಿಂದ ಅನುಷ್ಠಾನ ಮಾಡಿದಲ್ಲಿ ಮಾತ್ರ ಮುಸ್ಲಿಂ ಸಮುದಾಯ ಸಮಗ್ರ ಅಭಿವೃದ್ಧಿ ಕಡೆ ಮುಖ ಮಾಡಲು ಸಾಧ್ಯ ಎಂದರು.

ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಯಾವುದೇ ಬಗೆಯ ಸ್ಪಷ್ಟತೆಗಳು ಕಾಣಿಸದೆ ಗೊಂದಲಗಳು ಆವರಿಸಿವೆ. ಯಾವುದೇ ಸಮುದಾಯಗಳ ಅಭಿವೃದ್ಧಿಗೆ ಕ್ರಿಯಾತ್ಮಕ ಸ್ವರೂಪ ಕೊಡಬೇಕಾದರೆ ಗುಣಾತ್ಮಕ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದ ಭರವಸೆ ಬೇಕು. ಮುಸ್ಲಿಂ ಸಮುದಾಯ ಇಂತಹದ್ದೊಂದು ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪ್ರಯತ್ನಗಳು ಆಗಬೇಕು ಎಂದರು.

ಮುಸ್ಲಿಂ ಮಹಿಳೆಯರು ತಮ್ಮ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಇದರಿಂದಾಗಿ ಅವರು ಸಮುದಾಯದ ದನಿಯಾಗಿ ರೂಪುಗೊಳ್ಳುತ್ತಾರೆ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದುತ್ತಾರೆ. ರಾಜಕೀಯ ಪಕ್ಷಗಳು ಮುಸ್ಲಿಂಮರನ್ನು ವೋಟ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ, ಅವರ ಬೇಡಿಕೆ ಈಡೇರಿಸುವಲ್ಲಿ ಮುಂದಾಗುತ್ತಿಲ್ಲ ಎಂದು ದೂರಿದರು.

ಎಚ್‌ಐಡಿ ಫೋರಂನ ವೆಂಕಟೇಶ್ ಮಾತನಾಡಿ, ಸಂವಿಧಾನ ಎಲ್ಲ ಸಮುದಾಯಗಳಿಗೂ ಸ್ವಾಭಿಮಾನ ಬದುಕಿನ ಹಕ್ಕು ಕೊಟ್ಟಿದೆ. ಹಕ್ಕುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಾನೂನು ಚೌಕಟ್ಟಿನಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಸ್ಲಿಂ ಸಮಾಜ ಅತ್ಯಂತ ತಳ ಸಮುದಾಯವಾಗಿದೆ. ಸಮಾಜದ ಮುಖ್ಯವಾಹಿನಿಗೆ ತರಬೇಕಾದರೆ ಸಂಘಟಿತ ಪ್ರಯತ್ನ ನಿರಂತರವಾಗಿರಬೇಕು. ಕೇಂದ್ರ ಸರ್ಕಾರ ಸಾಚಾರ ವರದಿಯನ್ನು ಜಾರಿಗೊಳಿಸಬೇಕು. ಇದರಲ್ಲಿ ೭೨ ಸಲಹೆಗಳಿದ್ದು, ಮುಸ್ಲಿಮರ ಏಳಿಗೆಗೆ ಈ ವರದಿ ಅನುಷ್ಠಾನ ಅಗತ್ಯವಾಗಿದೆ ಎಂದರು.

ಮುಸ್ಲಿಂ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಜಬೀನಾ ಖಾನಂ ಮಾತನಾಡಿ, ಕೇಂದ್ರ ಸರ್ಕಾರ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿ ಹತ್ತು ವರ್ಷಗಳು ಕಳೆದರು ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ವಸತಿ ಇಲ್ಲದವರಿಗೆ ಸೂರನ್ನು ಕಲ್ಪಿಸಬೇಕು. ಮುಸ್ಲಿಂ ಸಮುದಾಯದ ಜನಸಂಖ್ಯೆ ಅನುಗುಣವಾಗಿ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಒದಗಿಸಬೇಕು. ಸಾಚಾರ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.