ಶಿವಮೊಗ್ಗ (ಅ.06): ಮಹಾನಗರ ಪಾಲಿಕೆಯು ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಿದ್ದ ಆಹಾರ ಮೇಳದಲ್ಲಿ ಇಡ್ಲಿ, ಮೂಸಂಬಿ ತಿನ್ನಲು ದೊಡ್ಡ ಸಾಲೇ ನಿಂತಿತ್ತು. ಬೆಳಗಿನ ತಿಂಡಿಯ ಅವಧಿಯಾದ ಕಾರಣವೇನೋ ಎಂಬಂತೆ ಎಲ್ಲರೂ ಇಡ್ಲಿ-ಮೂಸಂಬಿ ತಿನ್ನುವ ಸ್ಪರ್ಧೆ ಕಿಕ್ಕಿರಿದು ಬಂದಿದ್ದರು.

ಮಹಾಪೌರ ಎಸ್‌.ಕೆ. ಮರಿಯಪ್ಪ ಹಾಗೂ ಆಯುಕ್ತೆ ತುಷಾರಮಣಿ ಅವರು ಇಡ್ಲಿ ತಿನ್ನುವ ಮೂಲಕವೇ ಸ್ಪರ್ಧೆಗೆ ಚಾಲನೆ ನೀಡಿದರು. ಮನೋರಂಜನೆಯ ಮೂಲಕ ಆಹಾರದ ಬಗ್ಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದರು. ಇದಕ್ಕೆ ಪೂರಕವೆಂಬದಂತೆ ಡೆಂಘೀ ಜ್ವರದ ವಿರುದ್ಧ ಜಾಗೃತಿಗಾಗಿ ಗೆದ್ದವರಿಗೆ ವಾಟರ್‌ ಫಿಲ್ಟರ್‌ ನೀಡಲು ಪಾಲಿಕೆ ಮುಂದಾಗಿತ್ತು.

ನಂತರ ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ, ಮಹಿಳೆಯರಿಗಾಗಿ ಮೂಸಂಬಿ ತಿನ್ನುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 195 ಸ್ಪರ್ಧಿಗಳಲ್ಲಿ 1 ನಿಮಿಷಕ್ಕೆ ಒಟ್ಟು 11 ಇಡ್ಲಿಗಳನ್ನು ತಿಂದ ವಿಮಲೇಶ್‌ ಪ್ರಥಮ, ತಬ್ಸಿನ್‌ ಅಹ್ಮದ್‌ ದ್ವಿತೀಯ ಹಾಗೂ ಆರ್‌. ವರುಣ್‌ ತೃತೀಯ ಸ್ಥಾನ ಗಳಿಸಿದರು.

ಇತ್ತ ಮಹಿಳೆಯರಿಗಾಗಿ ಆಯೋಜಿಸಿದ್ದ ಮೂಸಂಬಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ ಮೂರುವರೆ ಮೂಸಂಬಿ ತಿಂದ ಮಂಜಮ್ಮ ಪ್ರಥಮ, ಮಂಜುಳಾ ದ್ವಿತೀಯ ಹಾಗೂ ಅಶ್ವಿನಿ ಜಾಧವ್‌ ತೃತೀಯ ಬಹುಮಾನ ಪಡೆದರು.

ಇದೇ ಸಂದರ್ಭದಲ್ಲಿ ಮತ್ತೊಂದು ಕಡೆ ಅಂದರೆ ವೀರಶೈವ ಕಲ್ಯಾಣ ಮಂದಿರದಲ್ಲಿ ಅಡುಗೆæ ಮಾಡುವ ಸ್ಪರ್ಧೆ ಸಹ ಆಯೋಜಿಸಲಾಗಿತ್ತು. ಗೋಧಿ ಉತ್ಪನ್ನದಲ್ಲಿ ಸಸ್ಯಹಾರಿ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಹಲವು ಮಹಿಳೆಯರು ಭಾಗವಹಿಸಿ ಅತ್ಯಂತ ಸಂಭ್ರಮದಿಂದ ಅಡುಗೆ ಮಾಡುವ ದೃಶ್ಯ ಕಣ್ಮನ ಸೆಳೆಯುವಂತಿತ್ತು. ಆಯುಕ್ತೆ ತುಷಾರಮಣಿ ಸ್ಪರ್ಧೆ ಉದ್ಘಾಟಿಸಿದರು. ಉಪಮಹಾಪೌರರಾದ ಮಂಗಳಾ ಅಣ್ಣಪ್ಪ ಮತ್ತು ಆಹಾರ ಸಮಿತಿ ಅಧ್ಯಕ್ಷೆ ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು. ಈ ಎರಡೂ ಸ್ಪರ್ಧೆಯಲ್ಲಿ ಪಾಲಿಕೆಯ ಸದಸ್ಯರು, ಅಧಿಕಾರಿ ವರ್ಗದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.