- ಕರಾವಳಿ ಉತ್ಸವ ಉದ್ಘಾಟಿಸಿದ ನಟ ಪ್ರಕಾಶ್ ರೈ.- ಪ್ರಕಾಶ್ ರೈ ಯಾರೆಂದು ಕೇಳುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ಉತ್ತರಿಸಿದ ನಟ- ಪ್ರತಾಪ್ ಸಿಂಹ ಹೆಸರಲ್ಲಿ ಸಿಂಹವಿದೆ, ಹಾಗಾದರೆ ಅವರು ಪ್ರಾಣಿಯೇ? ಎಂದು ಕೇಳಿದ ರೈ.

ಮಂಗಳೂರು: ಕರಾವಳಿಯಲ್ಲಿ ಕೋಮು ಗಲಭೆ ಜಾಸ್ತಿಯಾಗುತ್ತಿದೆ. ನಮಗೆ ಕೊಲ್ಲುವ ಹಿಂಸೆ ಬೇಡ, ಸಮಾಜದ ಅಭಿವೃದ್ಧಿಯನ್ನು ಕಡೆಗಣಿಸಬಾರದು. ಇದಕ್ಕಾಗಿ ಮನುಷ್ಯರ ಉತ್ಸವಗಳು ಶುರುವಾಗಬೇಕು, ಭಯ ರಹಿತ ಬದುಕು ನಮ್ಮದಾಗಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ದ.ಕ. ಜಿಲ್ಲಾಡಳಿತದ ಆಶ್ರಯದಲ್ಲಿ ಶುಕ್ರವಾರ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಕೋಮು ಗಲಭೆ ನಡೆಸುವವರಿಗೆ ರೈತರ ನೋವಿನ ಭಾಷೆ ಅರ್ಥವಾಗುತ್ತಿಲ್ಲ. ತುತ್ತಿಗಾಗಿ ಪಡುವ ಕಷ್ಟ ಗೊತ್ತಾಗುತ್ತಿಲ್ಲ. ಮಕ್ಕಳಲ್ಲಿ ಯಾಕೆ ಭಯವನ್ನು ಉಂಟುಮಾಡುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಅಂಥವರಿಗೆ ಈಗ ಅರ್ಥ ಮಾಡಿಸುವ ಸಮಯ ಬಂದಿದೆ. ಜನರು ಮಾನವತಾವಾದಿ ಆಗಬೇಕು. ಮತದ ಹೆಸರಿನಲ್ಲಿ ಹಿಂಸೆ ಮಾಡಬೇಡಿ, ಅಂತಹ ರಾಜಕಾರಣ ಸರಿಯಲ್ಲ, ಎಂದರು. 

ಕೆಲವರಿಗೆ ನಾನು ಅರ್ಥವಾಗುತ್ತೇನೆ, ಇನ್ನೂ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಕೆಲವರಿಗೆ ನಾನು ಖಳನಾಯಕನಾಗಿದ್ದೇನೆ. ಇತ್ತೀಚೆಗೆ ಬೈಸಿಕೊಳ್ಳಲಾರಂಭಿಸಿದ್ದೇನೆ. ನನ್ನ ವಿರುದ್ಧ ಪ್ರತಿಭಟನೆಗೂ ಮುಂದಾಗಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಅದು ಅವರ ಭಾಷೆ, ಆದರೆ ನಾನು ಹಾಗೆ ಮಾತನಾಡುವುದಿಲ್ಲ ಎಂದು ಭಾಷಣದ ಆರಂಭದಲ್ಲಿ
ಮನದಾಳದ ಮಾತಿಗೆ ಮುಂದಾದರು.

ಸಂಸದ ಸಿಂಹಗೆ ತಿರುಗೇಟು

ಮೈಸೂರು ಸಂಸದ ಪ್ರತಾಸ್‌ಸಿಂಹ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಪ್ರಕಾಶ್ ರೈ, 'ನನ್ನ ಹೆಸರು ಪ್ರಕಾಶ್ ರೈ, ಸಿನಿಮಾದಲ್ಲಿ ಪ್ರಕಾಶ್ ರಾಜ್. ಮಲಯಾಳಂ, ತಮಿಳು, ತೆಲುಗಿನಲ್ಲಿ ಪ್ರಕಾಶ್ ರಾಜ್ ಆಗಿ ಎತ್ತರಕ್ಕೆ ಏರಿದ್ದೇನೆ. ನಾನು ಕರಾವಳಿಗೆ ಬಂದರೂ ಪ್ರತಾಪ್‌ಸಿಂಹ ಪ್ರಶ್ನಿಸುತ್ತಾರೆ. ನನ್ನ ಮೂಲವನ್ನು ಪ್ರಶ್ನಿಸುವವರು ನನ್ನನ್ನು ಎಷ್ಟು ತಿಳಿದುಕೊಂಡಿದ್ದಾರೆ? ಪ್ರಕಾಶ್ ರೈ ಇದೇ ಕನ್ನಡನಾಡಿನ ಮಗ. ಇದೇ ಜಿಲ್ಲೆಯ ಸಾಲೆತ್ತೂರಿನ ಮಂಜುನಾಥ ರೈ ಎಂಬವರ ಮಗ. ನಾನು ಕರಾವಳಿ ಕಡಲಿನ ಮಗನೆಂಬ ಹೆಮ್ಮೆ ಇದೆ. ನಾನು ಪ್ರಕಾಶ್‌ರಾಜ್ ಎಂದು ಬಳಸಿದರೆ ನಿಮಗೇನು ತೊಂದರೆ?. ಕನ್ನಡಿಗರಲ್ಲವೇ? ನಿಮಗೆ ಭಾಷೆ ಗೊತ್ತಿಲ್ಲ, ನಿಮ್ಮದು ಅವಾಚ್ಯ ಭಾಷೆ, ನನ್ನದು ಮನುಷ್ಯ ಭಾಷೆ. ಪ್ರತಾಪಸಿಂಹ ಹೆಸರಿನಲ್ಲಿ ಸಿಂಹವಿದೆ. ಹಾಗಾದರೆ ನೀವು ಪ್ರಾಣಿಯೇ? ನೀವು ಅನ್ನ ತಿನ್ನುತ್ತೀರಾ, ಬೇಟೆಯಾಡುತ್ತೀರಾ ಎಂದು ಪ್ರಶ್ನಿಸಬೇಕಾ?' ಎಂದು ಟಾಂಗ್ ನೀಡಿದರು.