ಅಡ್ಡ ರೋಗಗಳಿಂದಾಗಿ ಅಲೋಪತಿ ವೈದ್ಯ ಪದ್ದತಿಯಿಂದ ದೂರ ಸರಿಯುತ್ತಿರುವ ರೋಗಿಗಳಿಗೆ ಆಶಾಕಿರಣವಾಗಿರುವ ಆಯುರ್ವೇದ ಚಿಕಿತ್ಸೆಗೆ ಭಾರಿ ಬೇಡಿಕೆಯಿದೆಯಾದರೆ ಇಲ್ಲಿ ರೋಗಿಗಳಿಗಿಂತ ಆಸ್ಪತ್ರೆಗೇ ಚಿಕಿತ್ಸೆಯ ಅಗತ್ಯವಿರುವದು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹುಡುಗಿ ಗ್ರಾಮದ ದುರಾವಸ್ಥೆಯನ್ನು ತೋರಿಸುವಂತಾಗಿದೆ.
ಅರವಿಂದ್ ಪಾಟೀಲ್ ಹುಮನಾಬಾದ್
ಅಡ್ಡ ರೋಗಗಳಿಂದಾಗಿ ಅಲೋಪತಿ ವೈದ್ಯ ಪದ್ದತಿಯಿಂದ ದೂರ ಸರಿಯುತ್ತಿರುವ ರೋಗಿಗಳಿಗೆ ಆಶಾಕಿರಣವಾಗಿರುವ ಆಯುರ್ವೇದ ಚಿಕಿತ್ಸೆಗೆ ಭಾರಿ ಬೇಡಿಕೆಯಿದೆಯಾದರೆ ಇಲ್ಲಿ ರೋಗಿಗಳಿಗಿಂತ ಆಸ್ಪತ್ರೆಗೇ ಚಿಕಿತ್ಸೆಯ ಅಗತ್ಯವಿರುವದು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹುಡುಗಿ ಗ್ರಾಮದ ದುರಾವಸ್ಥೆಯನ್ನು ತೋರಿಸುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಗಿಡ ಮೂಲಿಕೆಯತ್ತ ವಾಲುತ್ತಿದ್ದು, ಸರಳವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸಿಗುವ ಆಯುರ್ವೇದ ಚಿಕಿತ್ಸೆ ಅಪರೂಪದ್ದಾಗಿದ್ದರೂ ಇಲ್ಲಿನ ಹುಡುಗಿ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಆಯುರ್ವೇದ ಆಸ್ಪತ್ರೆ ಸ್ಥಾಪಿಸಿ ಚಿಕಿತ್ಸೆ ಕಲ್ಪಿಸಲು ಮುಂದಾಗಿದೆಯಾದರೆ ಹಳೆಯ ಕಟ್ಟಡದಲ್ಲಿ ಮೂಲ ಸೌಲಭ್ಯಗಳಷ್ಟೇ ಅಲ್ಲ ವೈದ್ಯರ ಕೊರತೆಯೂ ಆಯುರ್ವೇದ ಚಿಕಿತ್ಸೆಯನ್ನು ಅಲ್ಲಿ ಬಂದವರಿಗೆ ಮೋಸವಾಗುತ್ತಿರುವದಂತೂ ಹೌದು.
ತಾಲೂಕಿನ ಹುಡುಗಿ ಗ್ರಾಮದಲ್ಲಿರುವ ಆರ್ಯುವೇದ ಚಿಕಿತ್ಸಾಲಯ ಕಟ್ಟಡ ತೀರ ಹಳೆಯದಾಗಿ ಕಟ್ಟಡ ಪೂರ್ಣ ಭಾಗ ಮಳೆಯಲ್ಲಿ ನೀರಿನಿಂದ ಸೋರುತ್ತಿದೆ, ಮಳೆಯ ಸಂದರ್ಭದಲ್ಲಿ ವಿದ್ಯುತ್ ಸಂಪೂರ್ಣ ಕಟ್ಟಡವನ್ನು ಆವರಿಸಿದ್ದರಿಂದ ವಿದ್ಯುತ್ ಶಾಕ್ ಆತಂಕದಲ್ಲಿ ಆಸ್ಪತ್ರೆಯ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದೆ.
ಕಳಾಹೀನ ಸ್ಥಿತಿ:
ಕಳೆದ1980 ರಲ್ಲಿ ಹುಡುಗಿ ಗ್ರಾಮದಲ್ಲಿ ಆರ್ಯುವೇದ ಆಸ್ಪತ್ರೆ ಬಾಡಿಗೆ ಕೋಣೆಯಲ್ಲಿ ಕರಿಬಸವೇಶ್ವರ ದೇವಸ್ಥಾನದ ಬಳಿ ನಡೆಯುತ್ತಿತ್ತು. 1993 ರಲ್ಲಿ ಹೊಸ ಕಟ್ಟಡ ನಿರ್ಮಿಸಿ ಚಿಕಿತ್ಸಾಲಯದ ಕಾರ್ಯ ನಿರ್ವಹಣೆ ನಡೆಯುತ್ತಿದೆ. ಚಿಕಿತ್ಸಾಲಯದ ಕಟ್ಟಡದಲ್ಲಿ ಕತ್ತಲೆ ಆವರಿಸಿದ್ದಲ್ಲದೆ ಶುದ್ಧ ಕುಡಿಯುವ ನೀರು, ರೋಗಿಗಳಿಗಾದರೂ ಆಸನ ವ್ಯವಸ್ಥೆ ಇಲ್ಲದಂತಾಗಿ ಅತ್ಯಂತ ಕಳಾಹೀನ ಸ್ಥಿತಿಗೆ ನೂಕಲ್ಪಟ್ಟಿದೆ.
ಚಿಕಿತ್ಸಾಲಯದಲ್ಲಿ ಹಿರಿಯ ವೈದ್ಯರು ಕೆಲಸ ನಿರ್ವಸುತ್ತಿದ್ದಾರೆ ಆದರೆ ವಾರದಲ್ಲಿ ೨ ದಿನ ಮಾತ್ರ ಹುಡುಗಿ ಗ್ರಾಮದಲ್ಲಿ ಸಾರ್ವಜನಿಕ ರೋಗಿಗಳ ತಪಾಸಣೆ ಮತ್ತಿತರ ಕಾರ್ಯಗಳು ನಡೆಸುವರು ಉಳಿದ ದಿನ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವದರಿಂದ ಇಲ್ಲಿನ ರೋಗಿಗಳಿಗೆ ವೈದ್ಯರೂ ಸಿಗದಂತಾಗಿದೆ. ವೈದ್ಯರೆ ಇಲ್ಲದಿರುವಾಗ ಆಸ್ಪತ್ರೆ ತೆರೆಯುವದೇ ಕಷ್ಟ, ವೈದ್ಯರು ಹೊರತುಪಡಿಸಿ ಡಿ ಗ್ರೂಪ್ ಸಿಬ್ಬಂದಿ ಮಾತ್ರ ಕೆಲಸ ನಿರ್ವಹಸುತ್ತಾರೆ.
ಆರ್ಯುವೇದದ ತಜ್ಞರು, ಸಾಕಷ್ಟು ಅನುಭವ ಉಳ್ಳ ವೈದ್ಯರೂ ಇಲ್ಲಿದ್ದಾರೆ ಅವರು ಇಲ್ಲಿ ಬರುವದು ಪ್ರತಿ ಸೋಮವಾರ ಮತ್ತು ಗುರುವಾರ ಆಗ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ರೋಗಿಗಳು ಸಾಲಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ಔಷಧಿಗಳ ಕೊರತೆ:
ಆಗಾಗ್ಗೆ ಅನುಭವಿ ವೈದ್ಯರು ಆಸ್ಪತ್ರೆಯತ್ತ ಸುಳಿಯುತ್ತಿದ್ದರೂ ಕಳೆದ ಎರಡ್ಮೂರು ತಿಂಗಳಿಂದ ಔಷಧಿಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಆರ್ಯುವೇದದ ಔಷಧಿಗಳನ್ನು ಹೊರ ಖರೀದಿಸುವದೂ ಕಷ್ಟ. ಆಯುರ್ವೇದ ಔಷಧಾಲಯಗಳ ಕೊರತೆಯೂ ಇದೆ. ಇದರಿಂದ ಹುಡುಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನಾನುಕೂಲವಾಗಿದೆ.
ಈಗಲಾದರೂ ಜಿಲ್ಲಾ ಆಯುಷ್ ಇಲಾಖೆ, ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಲ್ಲಿ ಆಸ್ಪತ್ರೆಯ ನವೀಕರಣ ಮತ್ತಿತರ ಸೌಲಭ್ಯ ಕಲ್ಪಿಸಲು ಕ್ರಮವಹಿಸುವದು ಅತ್ಯಗತ್ಯವಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಆರ್ಯುವೇದ ಚಿಕಿತ್ಸಾಲದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪೂರ್ಣ ಪ್ರಮಾಣದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವಂತಾಗಬೇಕು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲ ಸಿಗಲಿದೆ.
- ಶರಣಪ್ಪ ಮೂಲಗೆ, ಹುಡುಗಿ ಗ್ರಾಮಆರ್ಯುವೇದ ಚಿಕಿತ್ಸೆ ನಿಧಾನವಾದರೂ ಗುಣ ಮುಖವಾಗುವುದಲ್ಲದೆ ಮತ್ತೆ ರೋಗ ಬರದಂತೆ ತಡೆಗಟ್ಟುತ್ತದೆ. ಹೆಚ್ಚಿನ ಜನರು ಆರ್ಯುವೇದ ಚಿಕಿತ್ಸೆಗೆ ಒಲವು ತೋರುತ್ತಿದ್ದು ತಕ್ಷಣ ಅಗತ್ಯ ಔಷಧಿಗಳನ್ನ ಸದರಿ ಆಸ್ಪತ್ರೆಗಳಿಗೆ ಸಂಬಂಧಿತ ಇಲಾಖೆಯಿಂದ ರವಾನೆಯಾಗಬೇಕು.
- ಶಿವಕುಮಾರ, ಹುಮನಾಬಾದ್
