‘ನಮ್‌ ಮನಿಗೆ ಕಸಾ ಇಸಕೊಳ್ಳಾಕ ಪೌರಕಾರ್ಮಿಕರು ಬಂದೇ ಇಲ್ಲ ನೋಡ್ರಿ... ಹೀಂಗಾದ್ರ ನಾವು ಕಸಾನ ರೋಡನ್ಯಾಗ್‌ ಎಸಿಬೇಕಾಗತೈತಿ’ ಎಂದು ಇನ್ಮುಂದೆ ಮಹಾನಗರದ ನಿವಾಸಿಗಳು ಹೇಳುವಂತಿಲ್ಲ. ಇನ್ನು ಪೌರಕಾರ್ಮಿಕರು ‘ಆ ಮನಿಗೆ ಕಸ ಇಸಕೊಳ್ಳಾಕ ಹೋಗಿದ್ದೆ. ಆದ್ರ ಅವರ ಇರಲಿಲ್ಲ. ಕಸಾನೂ ಹೊರಗ ಇಟ್ಟಿರಲಿಲ್ಲ’ ಎಂದು ಸುಳ್ಳು ಹೇಳುವಂತಿಲ್ಲ! 

ಹುಬ್ಬಳ್ಳಿ (ಅ. 17): ‘ನಮ್‌ ಮನಿಗೆ ಕಸಾ ಇಸಕೊಳ್ಳಾಕ ಪೌರಕಾರ್ಮಿಕರು ಬಂದೇ ಇಲ್ಲ ನೋಡ್ರಿ... ಹೀಂಗಾದ್ರ ನಾವು ಕಸಾನ ರೋಡನ್ಯಾಗ್‌ ಎಸಿಬೇಕಾಗತೈತಿ’ ಎಂದು ಇನ್ಮುಂದೆ ಮಹಾನಗರದ ನಿವಾಸಿಗಳು ಹೇಳುವಂತಿಲ್ಲ. ಇನ್ನು ಪೌರಕಾರ್ಮಿಕರು ‘ಆ ಮನಿಗೆ ಕಸ ಇಸಕೊಳ್ಳಾಕ ಹೋಗಿದ್ದೆ. ಆದ್ರ ಅವರ ಇರಲಿಲ್ಲ. ಕಸಾನೂ ಹೊರಗ ಇಟ್ಟಿರಲಿಲ್ಲ’ ಎಂದು ಸುಳ್ಳು ಹೇಳುವಂತಿಲ್ಲ!

ಹೀಗೆ ಸಾಬೂಬು ಹೇಳಿ ಕಸ ವಿಲೇವಾರಿ ಬಗ್ಗೆ ಅಸಡ್ಡೆ ವಹಿಸುವವರಿಗೆ ಬ್ರೇಕ್‌ ಹಾಕಲು ಹುಬ್ಬಳ್ಳಿ-ಧಾರವಾಡ ಅವಳಿ ನಗರಿಯಲ್ಲಿ ಸಿದ್ಧತೆ ನಡೆದಿದೆ. ಕಸ ವಿಲೇವಾರಿಯನ್ನು ಸಮರ್ಪಕಗೊಳಿಸುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ‘ಆರ್‌ಎಫ್‌ಐಡಿ ಟ್ಯಾಗ್‌’ ವ್ಯವಸ್ಥೆ ಬರಲಿದೆ.

ತಿಪ್ಪೆಯಾಗಿ ಮಾರ್ಪಟ್ಟ ಇಳಕಲ್ಲ ತರಕಾರಿ ಮಾರುಕಟ್ಟೆ!

ಸದ್ಯ ಪ್ರಾಯೋಗಿಕವಾಗಿ 4 ವಾರ್ಡ್‌ಗಳಲ್ಲಿ 10 ಸಾವಿರ ಟ್ಯಾಗ್‌ಗಳನ್ನು ಅಳವಡಿಸಲಾಗಿದೆ. ಇನ್ನು 15 ದಿನಗಳಲ್ಲಿ ಇವು ಕಾರ್ಯಾರಂಭ ಮಾಡಲಿದ್ದು, ಸ್ಮಾರ್ಟ್‌ಸಿಟಿ ಹಾಗೂ ಮಹಾನಗರ ಪಾಲಿಕೆ ಈ ಯೋಜನೆಯನ್ನು ನಿರ್ವಹಿಸಲಿವೆ.

ಏನಿದು ಆರ್‌ಎಫ್‌ಐಡಿ:

ಆರ್‌ಎಫ್‌ಐಡಿ ಎಂದರೆ ‘ರೆಡಿಯೋ ಫ್ರಿಕ್‌ವೆನ್ಸಿ ಐಡಿಟೆಂಟಿಫಿಕೇಶನ್‌’ ಟ್ಯಾಗ್‌. ಇದನ್ನು ಪ್ರತಿ ಮನೆಯ ಕಾಂಪೌಂಡ್‌, ಗೇಟ್‌ ಸೇರಿದಂತೆ ಆ ಮನೆಯವರು ಕಸ ಶೇಖರಿಸುವ ಜಾಗದಲ್ಲಿ ಅಳವಡಿಸಲಾಗುತ್ತದೆ. ಸಣ್ಣ ಚಿಪ್‌ ಹೊಂದಿರುವ ಟ್ಯಾಗ್‌ ಇದಾಗಿದೆ. ಪೌರಕಾರ್ಮಿಕರ ಬಳಿ ರೀಡರ್‌ ಇರುತ್ತದೆ.

ಮನೆಗೆ ಕಸ ಸಂಗ್ರಹಿಸಲು ಹೋದಾಗ ಕಸ ಸಂಗ್ರಹಿಸಿದ ಬಳಿಕ ತನ್ನ ಬಳಿ ಇರುವ ರೀಡರ್‌ನ್ನು ಟ್ಯಾಗ್‌ ಮುಂದೆ ಹಿಡಿದಾಗ ಅದು ರೀಡರ್‌ನಲ್ಲಿ ನಮೂದಾಗುತ್ತದೆ. ಹೀಗೆ ರೀಡ್‌ ಮಾಡಿದ್ದು ನಗರದ ಸಾಂಸ್ಕೃತಿಕ ಭವನದಲ್ಲಿ ಸ್ಥಾಪಿಸಿರುವ ‘ಕಮಾಂಡಿಂಗ್‌ ಕಂಟ್ರೋಲ್‌ ರೂಂನ ಕಂಪ್ಯೂಟರ್‌’ನಲ್ಲಿ ದಾಖಲಾಗುತ್ತದೆ. ಆ ಮನೆಯಿಂದ ಪೌರಕಾರ್ಮಿಕ ಕಸ ಸಂಗ್ರಹಿಸಿದ್ದಾನೆ ಎಂಬುದು ದಾಖಲಾಗುತ್ತದೆ.

ಆಗ ನಿವಾಸಿಗಳು, ತಮ್ಮ ಮನೆಗೆ ಕಸ ತೆಗೆದುಕೊಂಡು ಹೋಗಲು ಪೌರಕಾರ್ಮಿಕರು ಬಂದೇ ಇಲ್ಲ ಎಂದು ಹೇಳಲು ಸಾಧ್ಯವಾಗಲ್ಲ. ಇನ್ನು ಪೌರಕಾರ್ಮಿಕರು ಈಗ ಹೇಳುವಂತೆ ‘ನಾವು ಅವರ ಮನೆಗೆ ಹೋಗಿದ್ದೆವು. ಆದರೆ ಆ ಮನೆಯಲ್ಲಿ ಯಾರೂ ಇರಲೇ ಇಲ್ಲ’ ಎಂದು ಕೂಡ ಹೇಳಲು ಬರಲ್ಲ. ಆ ಮನೆಗೆ ಹೋಗಿದ್ದರೆ ದಾಖಲಾಗುತ್ತದೆ. ಇಲ್ಲದಿದ್ದಲ್ಲಿ ಇಲ್ಲ. ಯಾರೇ ಸುಳ್ಳು ಹೇಳಿದರೂ ಗೊತ್ತಾಗಿ ಬಿಡುತ್ತೆ.

ಸುಳ್ಳು ಹೇಳಿ ನುಣುಚಿಕೊಂಡೀರಾ ಎಚ್ಚರ!

ಬೆಳೆಯುತ್ತಿರುವ ಮಹಾನಗರದಲ್ಲಿ ಕಸವಿಲೇವಾರಿ ದೊಡ್ಡ ಸವಾಲಾಗಿದೆ. ಮನೆ ಮನೆಗೆ ಕಸ ಸಂಗ್ರಹಿಸುವ ವಾಹನಗಳಿದ್ದರೂ ನಿವಾಸಿಗಳು ಅಲ್ಲಲ್ಲಿ ರಸ್ತೆ ಮೇಲೆ ಎಸೆಯುವುದು ಸರ್ವೆಸಾಮಾನ್ಯ. ಇದಲ್ಲದೆ, ಪೌರಕಾರ್ಮಿಕರು ಕೆಲಸದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುವುದೂ ಉಂಟು. ಇವೆಲ್ಲವುಗಳಿಗೆ ಕಡಿವಾಣ ಹಾಕಲು, ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಆರ್‌ಎಫ್‌ಐಡಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಧಾರವಾಡದ ವಾರ್ಡ್‌ ನಂ.14, ಹುಬ್ಬಳ್ಳಿಯ 29, 23, 24ಎ ಈ ನಾಲ್ಕು ವಾರ್ಡ್‌ಗಳಲ್ಲಿನ 10 ಸಾವಿರ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸಲಾಗಿದ್ದು, 15 ದಿನಗಳ ಬಳಿಕ ಕಾರ್ಯಾಚರಣೆ ಆರಂಭವಾಗಲಿದೆ. ಈ 4 ವಾರ್ಡ್‌ಗಳಲ್ಲಿನ ಯಶಸ್ಸು ನೋಡಿಕೊಂಡು ಉಳಿದ ವಾರ್ಡ್‌ಗಳಿಗೂ ವಿಸ್ತರಿಸಲು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆ ನಿರ್ಧರಿಸಿದೆ.

ಪ್ರಸ್ತುತ ತಾತ್ಕಾಲಿಕ ಕಮಾಂಡಿಂಗ್‌ ಕಂಟ್ರೋಲ್‌ ರೂಮ್‌ನಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ಮಾಚ್‌ರ್‍ ಅಂತ್ಯದ ವೇಳೆಗೆ ಕಾಯ. ಕಂಟ್ರೋಲ್‌ ರೂ, ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೀಡರ್‌ ಅನ್ನು ಯಾವ ರೀತಿ ಬಳಕೆ ಮಾಡಬೇಕು. ಆರ್‌ಎಫ್‌ಐಡಿ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಕುರಿತು ಪೌರಕಾರ್ಮಿಕರು, ಪರಿಸರ ಅಧಿಕಾರಿಗಳು, ಕಂದಾಯ ನಿರೀಕ್ಷಕರಿಗೆ ತರಬೇತಿ ನೀಡಲಾಗಿದೆ. ಕಸ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿಸುವ ಸಲುವಾಗಿ ಆರ್‌ಎಫ್‌ಐಡಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು, ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ 4 ವಾರ್ಡ್‌ಗಳಲ್ಲಿ 10 ಸಾವಿರ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಹೊಸ ಸಿಸ್ಟಂ ಪ್ರಾರಂಭವಾಗಲಿವೆ. ಬಳಿಕ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು. ಇದರಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತದೆ.

- ಎನ್‌.ಎಚ್‌.ನರೇಗಲ್‌, ಸಾರ್ವಜನಿಕ ಸಂಪರ್ಕಾಧಿಕಾರಿ, ಸ್ಮಾರ್ಟ್‌ಸಿಟಿ

- ಶಿವಾನಂದ ಗೊಂಬಿ