Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಮಳೆಯ ಅಬ್ಬರ; ಜಕ್ಕಲಮಡಗು ಜಲಾಶಯದಲ್ಲಿ ಒಂದೇ ದಿನಕ್ಕೆ ಭರ್ಜರಿ ನೀರು; ಇನ್ನು 18 ತಿಂಗಳು ನೀರಿನ ಬವಣೆ ಇಲ್ಲ

2015ರ ನವೆಂಬರ್‌ ತಿಂಗಳಿನಲ್ಲಿ ವಾಯುಭಾರ ಕುಸಿತದ ಪರಿಣಾಮ ಸುರಿದ ಮಳೆಗೆ ಈ ಜಲಾಶಯದಲ್ಲಿ ಉತ್ತಮ ನೀರು ಶೇಖರಣೆಯಾಗಿ ಪ್ರಸ್ತುತ ಬರದಲ್ಲೂ ನಗರ ನಿವಾಸಿಗಳಿಗೆ ನೀರು ತೊಂದರೆಯಾಗದಂತಾಗಿತ್ತು. ಆದರೆ ಶುಕ್ರವಾರದ ಮಳೆಯಿಂದಾಗಿ ಮುಂದಿನ ಒಂದೂವರೆ ವರ್ಷ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗದು ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.

heavy rain in chikballapur solves water problem of people

ಚಿಕ್ಕಬಳ್ಳಾಪುರ: ವರುಣನ ಅಟ್ಟಹಾಸ ಮುಂದುವರಿದ ಪರಿಣಾಮ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿ ನಲ್ಲಿ ಬೆಳೆದಿದ್ದ ಟೊಮೇಟೋ ಬೆಳೆ ಸಂಪೂರ್ಣ ನೆಲಕಚ್ಚಿದ್ದರೆ, ನಗರಕ್ಕೆ ನೀರೋದಗಿಸುವ ಜಕ್ಕಲಮಡಗು ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಂದಿದೆ.

ಶುಕ್ರವಾರ ತಡರಾತ್ರಿ ಆರಂಭವಾದ ಮಳೆಯಲ್ಲಿ ಬಿರುಗಾಳಿ ಇಲ್ಲದ ಕಾರಣ ಪ್ರಸ್ತುತ ವರ್ಷದಲ್ಲೇ ಅತಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ. ಮಳೆ ಹೆಚ್ಚಾದ ಪರಿಣಾಮ ಮತ್ತು ಮಳೆ ಹೋಗಲು ಇದ್ದ ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ತೀವ್ರ ಸಮಸ್ಯೆ ಎದುರಾಗಿದೆ.

ಜಕ್ಕಲಮಡುಗು ಜಲಾಶಯಕ್ಕೆ 8 ಅಡಿ ನೀರು: ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಅನನುಕೂಲವಾ​ಗಿದ್ದರೂ, ನಗರ ನಿವಾಸಿಗಳಿಗೆ ಒಳಿತಾಗಿದೆ. ಇಡೀ ನಗರಕ್ಕೆ ಕುಡಿಯುವ ನೀರೊದಗಿಸುವ ಏಕೈಕ ಜಲಮೂಲವಾಗಿರುವ ಜಕ್ಕಲಮಡಗು ಜಲಾಶಯಕ್ಕೆ ಒಂದೇ ರಾತ್ರಿ 8 ಅಡಿ ನೀರು ಶೇಖರಣೆಯಾಗಿದೆ. ಜಕ್ಕಲ ಮಡಗು ಜಲಾಶಯಕ್ಕೆ ನೀರಿನ ಸೆಲೆಗಳಿರುವುದು ದೊಡ್ಡಬಳ್ಳಾಪುರದ ಕಡೆಯಿಂದ. ಹಾಗಾಗಿ ಮೇಲ್ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಶೇಖರಣೆ​ಯಾಗುತ್ತದೆ. ಶುಕ್ರವಾರ ರಾತ್ರಿ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಜಲಾಶಯಕ್ಕೆ ದಾಖಲೆ ಪ್ರಮಾಣದ ನೀರು ಶೇಖರಣೆಯಾಗಿದೆ.

ಒಂದೂವರೆ ವರ್ಷಕ್ಕೆ ನೀರಿಗೆ ತೊಂದರೆಯಿಲ್ಲ: 2015ರ ನವೆಂಬರ್‌ ತಿಂಗಳಿನಲ್ಲಿ ವಾಯುಭಾರ ಕುಸಿತದ ಪರಿಣಾಮ ಸುರಿದ ಮಳೆಗೆ ಈ ಜಲಾಶಯದಲ್ಲಿ ಉತ್ತಮ ನೀರು ಶೇಖರಣೆಯಾಗಿ ಪ್ರಸ್ತುತ ಬರದಲ್ಲೂ ನಗರ ನಿವಾಸಿಗಳಿಗೆ ನೀರು ತೊಂದರೆಯಾಗದಂತಾಗಿತ್ತು. ಆದರೆ ಶುಕ್ರವಾರದ ಮಳೆಯಿಂದಾಗಿ ಮುಂದಿನ ಒಂದೂವರೆ ವರ್ಷ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗದು ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.

ನಗರ ನಿವಾಸಿಗಳಿಗೆ ಪ್ರತಿನಿತ್ಯ 30 ಲಕ್ಷ ಲೀಟರ್‌ ನೀರು ಪ್ರಸ್ತುತ ಬಳಸಲಾಗುತ್ತಿದೆ. ಜೊತೆಗೆ ದೊಡ್ಡಬಳ್ಳಾಪುರ ನಗರಕ್ಕೂ ಇದೇ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದ್ದು, ಪ್ರತಿನಿತ್ಯ 10 ಲಕ್ಷ ಲೀಟರ್‌ ನೀರು ದೊಡ್ಡಬಳ್ಳಾಪುರ ನಾಗರಿಕರಿಗಾಗಿ ಉಪಯೋಗಿಸಲಾಗುತ್ತಿದೆ. ಹಾಗಾಗಿ ಪ್ರತಿ ನಿತ್ಯ 40 ಲಕ್ಷ ಲೀಟರ್‌ ನೀರು ಬಳಸಲಾಗುತ್ತಿದ್ದು, ಈ ಅಂಕಿ ಅಂಶದಂತೆ ಮುಂದಿನ 18 ತಿಂಗಳು ಉಭಯ ನಗರಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗದ ಕಾರಣ ನಗರಸಭೆ ನಿಟ್ಟುಸಿರುವ ಬಿಡುವಂತಾಗಿದೆ. ಜಕ್ಕಲಮಡಗು ಜಲಾಶಯದ ಒಟ್ಟು ಪ್ರಮಾಣ 45 ಅಡಿಗಳಾಗಿದ್ದು, ಶುಕ್ರವಾರ ಬೆಳಗಿನ ವೇಳೆಗೆ 28 ಅಡಿ ನೀರು ಉಳಿದಿತ್ತು. ಆದರೆ ಶುಕ್ರವಾರ ರಾತ್ರಿ ಮಳೆಯಿಂದಾಗಿ 8 ಅಡಿ ನೀರು ಶೇಖರಣೆಯಾಗಿದ್ದು, ಪ್ರಸ್ತುತ ಜಕ್ಕಲಮಡಗು ಜಲಾಶಯದ ನೀರಿನ ಮಟ್ಟ36 ಅಡಿಯಾಗಿದೆ. ಜಲಾಶಯ ತುಂಬಿ ಕೋಡಿ ಹರಿಯಲು ಇನ್ನು 9 ಅಡಿಗಳು ಮಾತ್ರ ಬಾಕಿ ಇದ್ದು, ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದರೆ ಈ ವರ್ಷ ಜಲಾಶಯ ತುಂಬಿ ಹರಿಯಲಿದೆ ಎಂಬ ವಿಶ್ವಾಸವನ್ನು ಶಾಸಕ ಡಾ.ಕೆ. ಸುಧಾಕರ್‌ ವ್ಯಕ್ತಪಡಿಸಿದ್ದಾರೆ.

ನೆಲಕಚ್ಚಿದ ಟೊಮೇಟೊ: ತಾಲೂಕಿನ ಗಿಡ್ನಹಳ್ಳಿ ಗ್ರಾಮದ ಸುಶೀಲಮ್ಮ ಎಂಬುವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೇಟೊ ಬೆಳೆ ಸಂಪೂರ್ಣ ನೆಲಕಚ್ಚಿದೆ. ಸಾವಿರಾರು ರುಪಾಯಿ ವೆಚ್ಚ ಮಾಡಿ ಹಾಕಿದ್ದ ಬೆಳೆ ಕೊಯ್ಲಿಗೆ ಬಂದಿದ್ದು, ಕಾಯಿ ಕಿತ್ತು ಮಾರುಕಟ್ಟೆಗೆ ಸಾಗಿಸುವ ಸಂದರ್ಭದಲ್ಲಿ ಬಿದ್ದ ಮಳೆಗೆ ಸಂಪೂರ್ಣ ಬೆಳೆ ಆಹುತಿಯಾಗಿದೆ. ಅಲ್ಲದೆ ಹಣ್ಣು ತರಕಾರಿ ಬೆಳೆಗಳಿಗೂ ತೀವ್ರ ಹಾನಿಯಾಗಿದ್ದು, ನಗರದ ರಸ್ತೆಗಳು ಕೆಸರು ಗದ್ದೆಗಳಾಗಿ ಪರಿವರ್ತಿತವಾಗಿವೆ. ಸಾಲದೆಂಬಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಪ್ರಸಕ್ತ ವರ್ಷದ ಮಳೆ ವಿವರ:
ಪ್ರಸ್ತುತ ವರ್ಷದಲ್ಲಿಯೇ ಶುಕ್ರವಾರ ರಾತ್ರಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಬಾಗೇಪಲ್ಲಿ 11.2 ಮಿಲಿಮೀಟರ್, ಚಿಕ್ಕಬಳ್ಳಾಪುರ 28.2 ಮಿಮೀ, ಚಿಂತಾಮಣಿ 8.6 ಮಿಮೀ, ಗುಡಿಬಂಡೆ 10.7 ಮಿಮೀ, ಶಿಡ್ಲಘಟ್ಟ 19.0 ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸರಾಸರಿ 20 ಮಿಲಿಮೀಟರ್ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios